ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ : ಯಕ್ಷಗಾನ ತರಬೇತಿ ಉದ್ಘಾಟನೆಯಲ್ಲಿ ತ್ಯಾಗಂ ಹರೇಕಳ ಹೇಳಿಕೆ

yaksha
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಯಕ್ಷಗಾನ ತರಬೇತಿ ಪಡೆಯುವುದರಿಂದ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಸಾಧ್ಯ. ಮನರಂಜನೆಯೊಂದಿಗೆ ಸಂಸ್ಕಾರ ನೀಡುವ ಶ್ರೀಮಂತ ಕಲೆ ಯಕ್ಷಗಾನ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಯಕ್ಷಗಾನ ಪೂರಕ ಎಂದು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಹೇಳಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಮಂಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ಷೇತ್ರದ ಅರ್ಚಕ ರಾಘವೇಂದ್ರ ರಾವ್ ಮಂಜನಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರಾವಳಿಯ ಗಂಡು ಕಲೆ ಯಕ್ಷಗಾನ ನಾಟ್ಯ ತರಬೇತಿ ಹಮ್ಮಿಕೊಳ್ಳಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕರಿಸುತ್ತಿರುವುದು ಶ್ಲಾಘನೀಯ. ಪರಿಸರದ ಹೆಚ್ಚಿನ ವಿದ್ಯಾರ್ಥಿಗಳು ತರಬೇತಿಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಕಿನ್ಯಾ, ಗುರುರಾಜ್ ಭಟ್ ಕೈರಂಗಳ, ಸಮಾಜ ಸೇವಕಿ ಗುಣವತಿ ಪಿ.ಸುಲಾಯ, ನಾಟ್ಯಗುರು ಜಗದೀಶ್ ಎಸ್.ಗಟ್ಟಿ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು. ವಿಜೇತ್ ಎಂ.ಶೆಟ್ಟಿ ಮಂಜನಾಡಿ ಸ್ವಾಗತಿಸಿದರು. ಉದಯಕುಮಾರ್ ಅಂಚನ್ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net