

ಮಂಡ್ಯ: ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವಿರುವ ಡಿಜಿಟಲ್ ಎಕ್ಸರೇ ಯಂತ್ರವನ್ನು ಶಾಸಕ ರವಿಕುಮಾರ್ ಗಣಿಗ ಸೇವೆಗೆ ಸಮರ್ಪಣೆ ಮಾಡಿದರು.
ಕೆನರಾ ಬ್ಯಾಂಕ್‌ನಿಂದ 40 ಲಕ್ಷ ರೂ. ವೆಚ್ಚದ ಯಂತ್ರವನ್ನು ಮಿಮ್ಸ್‌ಗೆ ನೀಡಲಾಗಿದೆ. ತಾಂತ್ರಿಕ ಕಾರಣದಿಂದಾಗಿ ಯಂತ್ರ ಉದ್ಘಾಟನೆಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕರು ಸೇವೆಗೆ ಚಾಲನೆ ನೀಡಿದ ಕಾರಣ ರೋಗಿಗಳ ಬಳಕೆಗೆ ಲಭ್ಯವಾದಂತಾಗಿದೆ.
ಯಂತ್ರದ ವಿಶೇಷವೆಂದರೆ ಎಕ್ಸರೇ ಮಾಡಿದ ಕೆಲವೇ ನಿಮಿಷದಲ್ಲಿ ವರದಿ ರೋಗಿಗಳ ಕೈ ಸೇರಲಿದೆ. ಶಾಸಕರು ಈ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ್ದು ವಿಶೇಷವಾಗಿತ್ತು.
ಬಳಿಕ ಮಾತನಾಡಿದ ಅವರು, ಮಿಮ್ಸ್‌ಗೆ ಜಿಲ್ಲೆ ಮಾತ್ರವಲ್ಲದೆ ಚಾಮರಾಜನಗರ, ರಾಮನಗರ, ತುಮಕೂರು ಜಿಲ್ಲೆಯಿಂದಲೂ ರೋಗಿಗಳು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲವಾಗುವಂತೆ ಕೆನರಾ ಬ್ಯಾಂಕ್‌ನಿಂದ 40 ಲಕ್ಷ ರೂ. ವೆಚ್ಚದ ಸುಸಜ್ಜಿತವಾದ ಎಕ್ಸರೇ ಯಂತ್ರ ನೀಡಲಾಗಿದೆ. ಇದರಿಂದ ತ್ವರಿತವಾಗಿ ವರದಿ ರೋಗಿಗಳಿಗೆ ಸಿಗಲಿದೆ. ಮಿಮ್ಸ್‌ಗೆ ಇನ್ನಷ್ಟು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಅದರಂತೆ ಡಿಎಚ್‌ಒ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಿ, ಅಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಇತರರಿದ್ದರು.