

ಮಂಡ್ಯ: ಜಿಲ್ಲೆಯ ಹೆಗ್ಗುರುತುಗಳಲ್ಲಿ ಒಂದಾಗಿರುವ ಮೈಷುಗರ್ ಶಾಲೆಯನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಶೀಘ್ರವೇ 10 ಕೋಟಿ ರೂ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಮೈಷುಗರ್ ಶಾಲೆ ಕೊಡುವುದು ಬೇಡ ಎಂದು ಹೇಳಿದ್ದೇನೆ. ಅಲ್ಲದೆ, ಶಾಲೆಯ ಅಭಿವೃದ್ಧಿಗೆ ನೆರವು ನೀಡುವ ಭರವಸೆ ನೀಡಿದ್ದೆ. ಅದರ ವಿಚಾರದಲ್ಲಿ ನಮ್ಮ ತಂಡವೊಂದು ಮಂಡ್ಯದಲ್ಲಿ ಕೆಲಸ ಮಾಡುತ್ತಿದೆ. ಯಾರು ಅದರ ಬಗ್ಗೆ ಲಘುವಾಗಿ ಮಾತನಾಡುವ ಅವಶ್ಯಕತೆ ಇಲ್ಲ. ಮೈಷುಗರ್ ಶಾಲೆಯಿಂದ ಈಗಾಗಲೇ 10 ಕೋಟಿ ರೂ ಅನುದಾನಕ್ಕೆ ಅರ್ಜಿ ಕೊಟ್ಟಿದ್ದಾರೆ. ಸಧ್ಯದಲ್ಲೆ ಆ ಹಣ ಬಿಡುಗಡೆಯಾಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ಕೆಲ ದಿನಗಳಿಂದ ಕಾರಣಾಂತರಗಳಿಂದ ಮಂಡ್ಯಕ್ಕೆ ಭೇಟಿ ಕೊಡಲು ಆಗಿರಲಿಲ್ಲ. ಆದರೂ ನಾನು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಪ್ರತಿನಿತ್ಯ ಜಿಲ್ಲೆಯ ಮಾಹಿತಿ ಪಡೆಯುತ್ತಿದ್ದೆ. ಜಯಚಾಮರಾಜೇಂದ್ರ ಮಾರುಕಟ್ಟೆ ಮಳಿಗೆ ಉದ್ಘಾಟನೆಗೆ ಬಂದಿದ್ದೇನೆ. ಕೆಲಸದ ಒತ್ತಡದಲ್ಲೂ ಜಿಲ್ಲೆಗೆ ಹೆಚ್ಚು ಸಮಯ ಮೀಸಲು ಇಡುತ್ತೇನೆ. ಜತೆಗೆ ರಾಜ್ಯದ ಪ್ರವಾಸ ಮಾಡುವೆ. ಜಿಲ್ಲೆಯಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ಅನೇಕ ಯೋಜನೆಗೆ ಚಾಲನೆ ಕೊಟ್ಟಿದ್ದೇನೆ. ಈ ವರ್ಷ ಶಾಲಾ ಕಟ್ಟಡ, ಬಸ್ ನಿಲ್ದಾಣಗಳನ್ನು ಸಿಎಸ್‌ಆರ್ ನಿಧಿ ಮೂಲಕ ಅನುಷ್ಠಾನ ಮಾಡುತ್ತಿದ್ದೇನೆ. ಮೈಷುಗರ್ ಶಾಲೆ ಅಭಿವೃದ್ಧಿಗೂ ಅದೇ ನಿಧಿಯಿಂದ ಹಣ ನೀಡಲಾಗುತ್ತಿದೆ. ಅನುದಾನ ತರಿಸಿ ಕೊಡುವ ಜವಾಬ್ದಾರಿ ನನ್ನದು ಮೈಷುಗರ್ ಶಾಲೆಗೆ ಇತಿಹಾಸ ಇದೆ. ಯಾರೂ ಸಣ್ಣದಾಗಿ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಸಚಿವರು ಹೇಳಿದರು.
ಸುಸಜ್ಜಿತ ಆಟೋ ನಿಲ್ದಾಣ ಲೋಕಾರ್ಪಣೆ
ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ 35 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿತ ಆಟೋ ನಿಲ್ದಾಣವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೋಕಾರ್ಪಣೆಗೊಳಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವರ ಸಂಸತ್ ಪ್ರದೇಶಾಭಿವೃದ್ಧಿ ನಿಧಿಯಿಂದ ಆಟೋ ನಿಲ್ದಾಣ ನಿರ್ಮಾಣ ಮಾಡಿದ್ದೇವೆ. ಇದು ಸುಸಜ್ಜಿತ, ವಿಶಾಲ ಆಟೋ ನಿಲ್ದಾಣ, ಆಟೋ ಚಾಲಕರು ಹಾಗೂ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಇಲ್ಲಿ ಸುಸಜ್ಜಿತ ಆಟೋ ನಿಲ್ದಾಣ ಬೇಕೆನ್ನುವುದು ಬಹಳ ದಿನಗಳ ಬೇಡಿಕೆ ಆಗಿತ್ತು. ಆ ಬೇಡಿಕೆ ಈಡೇರಿಸುವ ಕೆಲಸ ಆಗಿದೆ. ಅಲ್ಪ ಕಾಲದಲ್ಲಿಯೇ ನಿಲ್ದಾಣ ನಿರ್ಮಾಣ ಆಗಿದೆ ಎಂದು ಹೇಳಿದರು.
ನಗರದಲ್ಲಿ ಆಟೋ ವ್ಯವಸ್ಥೆ ಜನತೆಯ ಸಂಚಾರಕ್ಕೆ ಬಹಳ ಅನುಕೂಲವಾಗಿದೆ. ಆದರೆ, ಆಟೋ ಚಾಲಕರು ಮಳೆ, ಬಿಸಿಲಿನಲ್ಲಿ ಕಷ್ಟ ಅನುಭವಿಸುತ್ತಿದ್ದರು. ನಮಗೊಂದು ಸುಸಜ್ಜಿತ ನಿಲ್ದಾಣ ಮಾಡಿಕೊಡಿ ಎಂದು ಕೇಳಿದ್ದರು. ತಕ್ಷಣವೇ ಅದಕ್ಕೆ ಕ್ರಮ ವಹಿಸಿದ್ದೇವೆ. ದೇವೇಗೌಡರ ಸಂಸತ್ ನಿಧಿ ಹಾಗೂ ನನ್ನ ಪಾಲಿನ ಸಂಸತ್ ನಿಧಿ ಅನುದಾನದಿಂದ ಕಾಮಗಾರಿ ಕೈಗೆತ್ತಿಗೊಂಡಿದ್ದೆವು. ಈ ಸಂದರ್ಭದಲ್ಲಿ ಅನುದಾನ ನೀಡಿದ ದೇವೇಗೌಡರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಚಿವರು ಹೇಳಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಸದಸ್ಯ ರವಿ, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಇತರರಿದ್ದರು.