29ರಂದು ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟನೆ

inbha shekar
Published on

ಕಾಸರಗೋಡು: ಕುಂಬಳೆ ಸನಿಹದ ಅನಂತಪುರ ಕೈಗಾರಿಕಾ ಅಭಿವೃದ್ಧಿ ಪ್ರಾಂಗಣದಲ್ಲಿ ಆರಂಭಿಸಲಾಗಿರುವ ಜಿಲ್ಲೆಯ ಅತಿ ದೊಡ್ಡ ಹಾಗೂ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಅ.29ರಂದು ಬೆಳಗ್ಗೆ 9ಕ್ಕೆ ರಾಜ್ಯ ಕೈಗಾರಿಕಾ ಖಾತೆ ಸಚಿವ ಪಿ.ರಾಜೀವ್ ಉದ್ಘಾಟಿಸಲಿದ್ದಾರೆ ಎಂದು ಗ್ರೀನ್ ವರ್ಮ್ಸ್ ಸಂಸ್ಥೆ ನಿರ್ದೇಶಕ ಸಿ.ಕೆ ಶಮೀರ್ ಬಾವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಇನ್ಬಾಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಹಸಿರು ಕ್ರಿಯಾಸೇನೆ ಸಂಗ್ರಹಿಸುವ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸುವ ಘಟಕ ಇದಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಲಾಗಿರುವ ಈ ಘಟಕದಲ್ಲಿ ವರ್ಷಕ್ಕೆ 10,000 ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಸ್ಕರಿಸಬಹುದಾಗಿದೆ. ಜಿಲ್ಲೆಯ 41 ಸ್ಥಳೀಯಾಡಳಿತ ಸಂಸ್ಥೆಗಳಿಂದ ಸಂಗ್ರಹಿಸಿದ ಎಲ್ಲ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗುವುದು. ಜಿಲ್ಲೆಯಲ್ಲಿ ಸಂಗ್ರಹವಾಗುವ ಎಲ್ಲ ಅಜೈವಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ವ್ಯವಸ್ಥೆ ಇದೇ ಮೊದಲ ಬಾರಿಗೆ ನಿರ್ಮಿಸಲಾಗಿದ್ದು, 70 ಮಂದಿ ಸ್ಥಳೀಯ ಮಹಿಳೆಯರಿಗೆ ಉದ್ಯೋಗ ಲಭ್ಯವಾಗಲಿದೆ. ಸಂಸ್ಥೆ ಸೀನಿಯರ್ ಆಪರೇಷನ್ ಮ್ಯಾನೇಜರ್ ಶ್ರೀರಾಗ್ ಕುರುವಾಟ್ ಮತ್ತು ಯೋಜನಾ ಸಂಯೋಜಕ ಶಾಕಿರ್ ನಿಹಾಲ್ ಸಿ.ಕೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net