ರೈತರಿಗೆ ನೆರವಿಗೆ ಬರಲಿರುವ ಸೊಸೈಟಿ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

Inauguration of warehouse building Mandya
Published on

ಮಂಡ್ಯ: ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘಗಳು ಜೀವನಾಡಿಯಂತಿವೆ. ಈ ಹಿನ್ನೆಲೆಯಲ್ಲಿ ಸಂಘಗಳು ಮತ್ತಷ್ಟು ಪರಿಣಾಮಕಾರಿಯಾಗಿ ರೈತರಿಗೆ ಅನುಕೂಲವಾಗುವಂತಹ ಕೆಲಸ ಮಾಡಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಸಲಹೆ ನೀಡಿದರು.

ತಾಲೂಕಿನ ಹುನಗನಹಳ್ಳಿ ಗ್ರಾಮದಲ್ಲಿ ಮುತ್ತೇಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ಉಪಗೋದಾಮು ಕಟ್ಟಡದ ಉದ್ಘಾಟನೆ ಮತ್ತು ನಾಮ ಫಲಕ ಅನಾವರಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಸರ್ಕಾರವು ರೈತರ ಪರವಾಗಿ ಕೆಲಸ ಮಾಡುತ್ತಿದೆ. ಹುನಗನಹಳ್ಳಿ ಗ್ರಾಮವು ಜಿಲ್ಲಾಕೇಂದ್ರದಿಂದ 34 ಕಿ.ಮೀ ದೂರದಲ್ಲಿದೆ. ಈ ಗ್ರಾಮಕ್ಕೂ ಅಗತ್ಯವಾಗಿ ಅಭಿವೃದ್ಧಿ ಯೋಜನೆ ಮಾಡಿಸಲಾಗುವುದು. ಬಸರಾಳು ಗ್ರಾಮದಿಂದ ಮುತ್ತೇಗೆರೆ ಗ್ರಾಮದ ರಸ್ತೆಯು ಅಂದಾಜು 10 ಕೋಟಿ ರೂ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಮುಖ್ಯಮಂತ್ರಿ ಅನುದಾನದಡಿ ವಿಶೇಷ ಯೋಜನೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮ ಮಾಡಲಾಗುವುದು. ಎಲ್ಲ ಪಕ್ಷದವರ ಸಹಕಾರದಿಂದಲೂ ಅಭಿವೃದ್ಧಿ ಮಾಡಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.

ಹೇಮಾವತಿ ಕೊನೆ ಹಂತದ ವ್ಯಾಪ್ತಿಗೆ ಈ ಗ್ರಾಮಗಳು ಬರುವುದರಿಂದ ನೀರು ಬರಲ್ಲ ಎಂಬುವ ಮಾತು ಕೇಳಿ ಬರುತ್ತದೆ. ಇದರ ಆಲೋಚನೆ ಮಾಡಿದ ಮುಖ್ಯಮಂತ್ರಿ ಅವರು ಬಸರಾಳು, ಹೊಣಕೆರೆ, ದೇವಲಾಪುರ ಗ್ರಾಮ ವ್ಯಾಪ್ತಿಯ ಕೆರೆಗಳಿಗೆ ಶ್ರೀರಂಗಪಟ್ಟಣದಿಂದ ಕಾವೇರಿ ನೀರು ಹರಿಸಲು 1,300 ಕೋಟಿ ರೂ ಯೋಜನೆಗೆ ಡಿಪಿಆರ್ ಸಿದ್ಧಗೊಳಿಸಲು ಸೂಚಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಸದನದಲ್ಲಿಟ್ಟು ಚರ್ಚೆ ನಡೆಸಿ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಒಟ್ಟಾರೆ ಬಸರಾಳು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.

ಸಂಘದ ಅಧ್ಯಕ್ಷ ಎಚ್.ಅಪ್ಪಾಜಿ ಮಾತನಾಡಿ, ಹುನಗನಹಳ್ಳಿ ಗೋದಾಮು ಕಟ್ಟಡ ನಿರ್ಮಾಣಕ್ಕೆ ಶಾಸಕ ರವಿಕುಮಾರ್ 10 ಲಕ್ಷ ರೂ, ಮಾಜಿ ಸಂಸದೆ ಸುಮಲತಾ ಅಧಿಕಾರದ ಅವಧಿಯಲ್ಲಿ 5 ಲಕ್ಷ ರೂ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು 2.50 ಲಕ್ಷ ರೂ ಅನುದಾನ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಮತ್ತಷ್ಟು ಅನುದಾನಕ್ಕಾಗಿ ಶಾಸಕರ ಬಳಿ ಮನವಿ ಮಾಡಿದ್ದೇವೆ ಅದನ್ನು ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಅಶೋಕ್, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ, ಮುಡಾ ಅಧ್ಯಕ್ಷ ನಯೀಂ, ಮುಖಂಡರಾದ ಸತೀಶ್, ಶೈಲೇಶ್, ಮಂಜೇಗೌಡ, ಲಕ್ಷ್ಮೀ, ಸುಧಾ, ಕೃಷ್ಣೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net