ಮಾತೃಭಾಷೆ ಬಗ್ಗೆ ಅಸಡ್ಡೆ ಭಾವ ಬೇಡ

oplus_131072
ಸೇಡಂನಲ್ಲಿ ಕವಿರಾಜ ಮಾರ್ಗ: ಸಹಸ್ರಮಾನದ ವಿವೇಕ ಕೃತಿಯನ್ನು ಶರಣಬಸವ ವಿವಿ ಕುಲಪತಿ ಪ್ರೊ.ಅನೀಲಕುಮಾರ ಬಿಡವೆ ಲೋಕಾರ್ಪಣೆಗೊಳಿಸಿದರು. ಡಾ.ಬಸವರಾಜ ಪಾಟೀಲ್ ಸೇಡಂ, ಕಲ್ಯಾಣರಾವ ಪಾಟೀಲ್, ಪ್ರೊ.ಲಿಂಗಣ್ಣ ಗೋನಾಳ, ಡಾ.ವಾಸುದೇವ ಅಗ್ನಿಹೋತ್ರಿ, ಪ್ರಭಾಕರ ಜೋಶಿ ಇದ್ದರು.
Published on

ಸೇಡಂ: ಸಾವಿರಾರು ವರ್ಷ ಇತಿಹಾಸವಿರುವ ಕನ್ನಡ ಭಾಷೆ ಬಗ್ಗೆ ಅಸಡ್ಡೆ ಭಾವ ತೋರುತ್ತಿರುವುದು ಸರಿಯಲ್ಲ ಎಂದು ಹಿರಿಯ ಮುತ್ಸದ್ದಿ ಡಾ.ಬಸವರಾಜ ಪಾಟೀಲ್ ಸೇಡಂ ಹೇಳಿದರು.

ಪಟ್ಟಣದ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನೃಪತುಂಗ ಅಧ್ಯಯನ ಸಂಸ್ಥೆ ಆಯೋಜಿಸಿದ್ದ ಡಾ.ವಾಸುದೇವ ಅಗ್ನಿಹೋತ್ರಿ ರಚಿಸಿದ ಕವಿರಾಜಮಾರ್ಗ: ಸಹಸ್ರಮಾನದ ವಿವೇಕ ಕೃತಿ ಬಿಡುಗಡೆ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿದ ಅವರು, ದೇಶಾದ್ಯಂತ ಆಂಗ್ಲಭಾಷೆ ಆವರಿಸಿಕೊಂಡಿದೆ. ಕನ್ನಡ ಮಾತನಾಡುವ ಮಟ್ಟಕ್ಕೆ ಸೀಮಿತವಾಗುವ ಹಂತದಲ್ಲಿದ್ದರೂ ಪ್ರತಿಯೊಬ್ಬರೂ ಕನ್ನಡ ಭಾಷೆ ಬಳಕೆ ಹೆಚ್ಚು ಮಾಡುವ ಮೂಲಕ ಅಸ್ತಿತ್ವ ಉಳಿಸಬೇಕು ಎಂದು ಸಲಹೆ ನೀಡಿದರು.

ಕೃತಿ ಬಿಡುಗಡೆಗೊಳಿಸಿದ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಅನೀಲಕುಮಾರ ಬಿಡವೆ ಮಾತನಾಡಿ, ತಾಂತ್ರಿಕ ಶಿಕ್ಷಣ ಬೋಧನೆಯಲ್ಲಿ ಕನ್ನಡದ ಪುಸ್ತಕಗಳು ಇಲ್ಲದ್ದರಿಂದ ಆಂಗ್ಲ ಭಾಷೆ ಮೊರೆ ಹೋಗಬೇಕಾಗಿದೆ. ತಾಂತ್ರಿಕ ಶಿಕ್ಷಣದ ಪಠ್ಯ ಸಾಹಿತ್ಯವನ್ನು ಕನ್ನಡ ಸಾಹಿತಿಗಳು ಅನುವಾದಿಸುವ ಅಥವಾ ಬರೆಯುವ ಕಾರ್ಯ ಮಾಡಿದರೆ ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣದಲ್ಲೂ ಮಾತೃಭಾಷೆಗೆ ಸ್ಥಾನ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶರಣಬಸವ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕಲ್ಯಾಣರಾವ ಪಾಟೀಲ್ ಮಾತನಾಡಿ, ಎಲ್ಲ ಜ್ಞಾನ ಶಾಸ್ತ್ರ-ಶಿಸ್ತುಗಳನ್ನು ಧಾರಣ ಮಾಡಿಕೊಂಡು ಬೆಳೆದು ಬಂದಿರುವ ಕನ್ನಡದ ಮೊದಲ ಕೃತಿಯಲ್ಲೇ ಭಾವೈಕ್ಯದ ಬೀಜದ ಮಾತುಗಳಿವೆ. ಇವುಗಳನ್ನು ಮರೆತರೆ ಸಾಮಾಜಿಕ ಸಾಮರಸ್ಯ ಸೊರಗುತ್ತದೆ. ಈ ದಿಸೆಯಲ್ಲಿ ಲೇಖಕರಾದವರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲಿಂಗಣ್ಣ ಗೋನಾಳ ಕೃತಿ ಪರಿಚಯಿಸಿ, ಕನ್ನಡ ಭಾಷೆಯ ಮೊದಲ ಲಭ್ಯ ಕೃತಿ ಕವಿರಾಜ ಮಾರ್ಗವನ್ನು ಕನ್ನಡಿಗರ ವಿವೇಕದ ಹಿನ್ನೆಲೆಯಲ್ಲಿ ಲೇಖಕರು ಸೊಗಸಾಗಿ ವಿವರಿಸಿದ್ದಾರೆ ಎಂದರು.

ಕೃತಿ ಲೇಖಕ ಡಾ.ವಾಸುದೇವ ಅಗ್ನಿಹೋತ್ರಿ, ಅಧ್ಯಕ್ಷತೆ ವಹಿಸಿದ್ದ ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರಭಾಕರ ಜೋಶಿ ಮಾತನಾಡಿದರು. ಹಿರಿಯ ಸಾಹಿತಿಗಳಾದ ಲಿಂಗಾರೆಡ್ಡಿ ಶೇರಿ, ಸಿದ್ದಪ್ಪ ತಳ್ಳಳ್ಳಿ, ಮಹಿಪಾಲರೆಡ್ಡಿ ಮುನ್ನೂರ, ಶ್ರೀಧರ ಇನಾಮದಾರ, ದತ್ತಾತ್ರೇಯ ಐನಾಪುರ, ಪ್ರಕಾಶ ಗೊಣಗಿ, ಪರಿಮಳಾ ಪಾಟೀಲ್, ರುಕ್ಮಿಣಿ ಕಾಳಗಿ, ರೂಪಾದೇವಿ ಬಂಗಾರ, ಶಿವಕಾಂತಮ್ಮ ರೆಮ್ಮಣ್ಣಿ ಇತರರಿದ್ದರು.

ಪ್ರೊ.ಶೋಭಾದೇವಿ ಚೆಕ್ಕಿ ಪ್ರಾರ್ಥಿಸಿದರು. ಜಗದೀಶ ಕಡಬಗಾಂವ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅವಿನಾಶ ಬೋರಂಚಿ ನಿರೂಪಣೆ ಮಾಡಿದರು. ಸಂತೋಷ ತೊಟ್ನಳ್ಳಿ ವಂದಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಚಂದ್ರಕಲಾ ಬಿದರಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net