

ಹುಮನಾಬಾದ್: ಕಾಯಕ ಜೀವಿಗಳಾದ ವಿಶ್ವಕರ್ಮ ಸಮಾಜದ ಜನರು ತಮ್ಮ ವೃತ್ತಿಯ ಜತೆಗೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಬಸವರಾಜ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಬುಧವಾರ ತಾಲೂಕು ವಿಶ್ವಕರ್ಮ ಸಮಾಜದಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇತರ ಸಮಾಜದಂತೆ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ. ಧುಮ್ಮನಸೂರ ಹತ್ತಿರ ಸಮಾಜಕ್ಕೆ ನೀಡಲಾಗಿರುವ ಸಿಎ ಸೈಟ್‌ನಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ತಮ್ಮ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಸಾನ್ನಿಧ್ಯ ಯಾದಗಿರ ಹಾಗೂ ಹುಮನಾಬಾದ್ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಶ್ರೀನಿವಾಸ ಸ್ವಾಮೀಜಿ, ಸ್ಥಳೀಯ ಹಿರೇಮಠ ಸಂಸ್ಥಾನದ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರು ಆಶಿರ್ವಚನ ನೀಡಿದರು.
ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಪಂಚಾಳ, ಪ್ರಧಾನ ಕಾರ್ಯದರ್ಶಿ ಶಿವಾನಂದ ಪಂಚಾಳ, ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದ ಜಿಲ್ಲಾ ನಾಮನಿರ್ದೇಶಕ ಬಾಬುರಾವ ಪಂಚಾಳ ಚಿಮ್ಕೋಡ, ಪ್ರಮುಖರಾದ ಅಶೋಕ ಸೋನಾರ, ಪ್ರಭಾಕರ ಶಾಸ್ತ್ರಿ, ಶಿವಕುಮಾರ ಪಂಚಾಳ, ರವಿಕಾಂತ ಪಂಚಾಳ ಇತರರಿದ್ದರು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಶ್ರೀ ವಿಶ್ವಕರ್ಮರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.