ಕೊಡಗು ರಕ್ಷಣಾ ವೇದಿಕೆಯ ಗ್ರಾಮ ಘಟಕದ ಕಚೇರಿ ಉದ್ಘಾಟನೆ

logo karave
Published on

ಮಡಿಕೇರಿ: ಗ್ರಾಮ ಮಟ್ಟದಿಂದಲೇ ಕೊಡಗು ರಕ್ಷಣಾ ವೇದಿಕೆ ಸಂಘಟನೆ ಬಲಗೊಳ್ಳುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಹೋರಾಟಗಳನ್ನು ರೂಪಿಸಲಾಗುವುದು ಕೊರವೇ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಎಂದರು.


ಕೊಡಗು ರಕ್ಷಣಾ ವೇದಿಕೆಯ ಮೊಟ್ಟ ಮೊದಲ ಗ್ರಾಮ ಘಟಕದ ಕಚೇರಿ ಕೆದಕಲ್ ಹೊರೂರು ಗ್ರಾಮದಲ್ಲಿ ಉದ್ಘಾಟಿಸಿ ಮಾತನಾಡಿದರು.


ಜಿಲ್ಲೆಯ ಗ್ರಾಮೀಣ ಪ್ರದೇಶಗಳು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗ್ರಾಮಸ್ಥರು ಸಂಘಟಿತರಾಗಬೇಕು. ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಕೊರವೇ ಅಭಿಯಾನ ಆರಂಭಿಸಿದ್ದು, ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.


ಕೆದಕಲ್ ಹೊರೂರು ಅಧ್ಯಕ್ಷ ಸಮೀರ್, ಉಪಾಧ್ಯಕ್ಷ ಯಂಕನ ಗೋಪಿನಾಥ್ ಗೌರವಾಧ್ಯಕ್ಷ ಕೊರವಂಡ ಅಂಜನ್ ಕುಮಾರ್, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಇಂದು ರಸ್ತೆ ತಡೆ ಪ್ರತಿಭಟನೆ: ತೊರೆನೂರು ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಸಾರಿಗೆ ಬಸ್‌ಗಳನ್ನು ನಿಲುಗಡೆಗೊಳಿಸಬೇಕೆಂದು ಒತ್ತಾಯಿಸಿ ನ೫ ರಂದು ಬೆಳಗ್ಗೆ ೮ ಗಂಟೆಗೆ ಕೊಡಗು ರಕ್ಷಣಾ ವೇದಿಕೆ ವತಿಯಿಂದ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ವೇದಿಕೆಯ ಅಧ್ಯಕ್ಷ ಸಾಗರ್ ತೊರೆನೂರು ತಿಳಿಸಿದ್ದಾರೆ.


ಅರಸೀಕೆರೆ ಮತ್ತು ಚನ್ನರಾಯಪಟ್ಟಣ ಘಟಕದ ಸರ್ಕಾರಿ ಸಾರಿಗೆ ಬಸ್ಸುಗಳು ಖಾಲಿ ಇದ್ದರೂ ತೊರೆನೂರು ಗ್ರಾಮ ವ್ಯಾಪ್ತಿಯಲ್ಲಿ ನಿಲುಗಡೆಗೊಳಿಸದೆ ಸಂಚರಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅನಾನುಕೂಲವಾಗುತ್ತಿದೆ. ಈ ಬಗ್ಗೆ ಘಟಕದ ವ್ಯವಸ್ಥಾಪಕರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಆರೋಪಿಸಿದ ಅವರು, ಗ್ರಾಮಸ್ಥರ ಸಹಕಾರದೊಂದಿಗೆ ಶನಿವಾರ ಶಾಂತಿಯುತ ಹೋರಾಟ ನಡೆಸಿ ರಾಜ್ಯ ಸಾರಿಗೆ ಸಂಸ್ಥೆಯ ಗಮನ ಸೆಳೆಯಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net