

ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಮಾಜಮುಖಿ ಕಾರ್ಯ ನಡೆಯುತಿದೆ. ಪ್ರೌಢಶಾಲೆ ವಿದ್ಯಾರ್ಥಿ ಜೀವನ ದಲ್ಲಿ ಮುಂದಿನ ಭವಿಷ್ಯಕ್ಕಾಗಿ ಗುರಿ ಹಾಕಿಕೊಳ್ಳುವ ಕಾಲಘಟ್ಟವಾಗಿದೆ. ಕಠಿಣ ಪರಿಶ್ರಮದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಅಂಕ ಪಡೆಯಲು ಯೋಜನೆ ಮುಖಾಂತರ ಟ್ಯೂಶನ್ ತರಗತಿ ಆಯೋಜಿಸಲಾಗಿದೆ ಎಂದು ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ.ಸವಣೂರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಡಬ ತಾಲೂಕು ವತಿಯಿಂದ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಸವಣೂರು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢ ಶಾಲೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ತಿಂಗಳುಗಳ ಅವಧಿಯ ಟ್ಯೂಷನ್ ಕ್ಲಾಸ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯಶಿಕ್ಷಕ ರಘು ಬಿ.ಆರ್.ಅಧ್ಯಕ್ಷತೆ ವಹಿಸಿ, ಈ ವಿಶೇಷ ತರಗತಿ ನಮ್ಮ ಶಾಲೆಯಲ್ಲಿ ಆಯೋಜಿಸಿರುವುದರಿಂದ ನಮ್ಮ ವಿದ್ಯಾರ್ಥಿಗಳು ಪ್ರಯೋಜನ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಬೇಕು ಎಂದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚೇತನಾ ಪ್ರಾಸ್ತಾವಿಸಿದರು. ಶಿಕ್ಷಕಿ ಲೀಲಾ ಸ್ವಾಗತಿಸಿ, ಶಿಕ್ಷಕ ಕಿಶನ್ ಬಿ.ವಿ.ವಂದಿಸಿದರು. ವಲಯ ಮೇಲ್ವಿಚಾರಕಿ ವೀಣಾ ಕೆ.ನಿರೂಪಿಸಿದರು.