

ಬಸವಕಲ್ಯಾಣ: ಓದುವುದು ಎಂದರೆ ಜ್ಞಾನ ಪಡೆವ ದಾರಿ. ಸಮಾಜದ ಒಳಿತಿಗಾಗಿ ಬಳಕೆ ಆಗುವುದನ್ನೇ ಜ್ಞಾನವೆನ್ನುತಾರೆ. ಪಠ್ಯ ಕೃತಿಗಳು ವ್ಯಕ್ತಿಯ ವ್ಯಕ್ತಿತ್ವವನ್ನು, ಸಮಾಜವನ್ನು ರೂಪಿಸುವ ಶಕ್ತಿ ಪಡೆದಿವೆ ಎಂದು ಕಲಬುರಗಿಯ ಎನ್‌ವಿ ಕಾಲೇಜು ಪ್ರಾಧ್ಯಾಪಕ ಡಾ.ಶಿವಾಜಿ ಮೇತ್ರೆ ಹೇಳಿದರು.
ನಗರದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಓದುವ ಬಗೆಗಳು ಒಂದು ಚಿಂತನೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ಬದುಕು ವ್ಯವಹಾರವಲ್ಲ. ಬದುಕಿನಲ್ಲಿ ಎಷ್ಟೇ ನಷ್ಟವಾದರೂ ಅದನ್ನು ಎದುರಿಸುವ, ಭರಿಸುವ ದಾರಿಯು ಜ್ಞಾನ ಪರಂಪರೆಯಲ್ಲಿ ಅಡಗಿದೆ ಎಂದರು.
ಮಾನವನಾಗುವ ಗುಣಗಳನ್ನು ಬಿತ್ತುವ ಕೆಲಸ ಶಿಕ್ಷಣದಿಂದ ನಡೆಯುತ್ತದೆ. ಪ್ರಶ್ನಿಸುವ ಸಾಮರ್ಥ್ಯ, ಹಲವು ಅರ್ಥಗಳನ್ನು ಕಂಡುಕೊಳ್ಳುವ ಪ್ರಮೆಯು ಓದಿನಲ್ಲಿದೆ. ಪ್ರತಿ ವಿಷಯದ ಮೂಲ ಅರಿಯಲು ದೊಡ್ಡ ಲೇಖಕರ ಕೃತಿ ಓದುವ ಅಗತ್ಯವಿದೆ. ಸಾಹಿತ್ಯದಿಂದ ವಿವೇಕವನ್ನು, ವಿಜ್ಞಾನದಿಂದ ಪರೀಕ್ಷಣೆಯ ಗುಣವನ್ನು ಬೆಳೆಯುತ್ತದೆ. ಭಾವಕೇಂದ್ರಿತವಾದ ಸಾಹಿತ್ಯ ಮತ್ತು ವಾಸ್ತವ ಕೇಂದ್ರೀತ ವಿಜ್ಞಾನ ಎರಡು ಮುಖ್ಯ ಎಂದರು.
ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಓದುವುದು ಎಂದರೆ ಅರಿವಿನ ಹರವು, ತಿಳುವಳಿಕೆಯ ಹಾಗೂ ಪ್ರಜ್ಞೆಯ ವಿಸ್ತಾರವೆಂದರ್ಥ. ಓದು ಹೊಸ ಅನುಭವ ಲೋಕದ ಪಯಣವಾಗಿದೆ. ಸಿನಿಮಾ, ಸಾಹಿತ್ಯ ಕೃತಿ, ಕಲಾಕೃತಿ ಮತ್ತು ಸಮಾಜವನ್ನು ಪಠ್ಯವಾಗಿ ಅನುಸಂಧಾನ ಮಾಡಿದಾಗ ಅವುಗಳ ಸಾಂಸ್ಕೃತಿಕ ಚಹೆರೆಗಳು ಕಾಣುತ್ತವೆ ಎಂದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಮಾತನಾಡಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಪ್ರಾಚಾರ್ಯೆ ಡಾ.ಶಾಂತಲಾ ಪಾಟೀಲ್, ಅಶೋಕರೆಡ್ಡಿ ಗದಲೆಗಾಂವ, ವಿವೇಕಾನಂದ ಶಿಂಧೆ, ಶ್ರೀನಿವಾಸ ಉಮಾಪುರೆ, ಪ್ರವೀಣ ಬಿರಾದಾರ, ನೀಲಮ್ಮ ಮೇತ್ರೆ, ಸಚಿನ ಬಿಡವೆ, ಸೌಮ್ಯಾ ಕರಿಗೌಡ, ರೋಶನ್ ಬಿ., ಗುರುದೇವಿ ಕಿಚಡೆ, ಪ್ರಭಾಕರ ನೌಗಿರೆ, ಬಸವರಾಜ ಗುಂಗೆ, ಸುಧೀರ ಗೋದೆ, ಪವನ ಪಾಟೀಲ್, ಜಗದೇವಿ ಜವಳಗೆ ಇದ್ದರು. ಚನ್ನಬಸಪ್ಪ ಗೌರ ಸ್ವಾಗತಿಸಿದರು. ಡಾ. ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು. ಗಂಗಾಧರ ಸಾಲಿಮಠ ವಂದಿಸಿದರು.
ಸೃಷ್ಟಿಯ ಅಗಮ್ಯ ಮತ್ತು ನಿಗೂಢತೆಗಳ ಅರಿವು ಗಂಭೀರ ಓದಿನಿಂದ ಸಾಧ್ಯ. ಆರ್ಥಿಕ ಸ್ವರೂಪದ ಬಗೆಗೆ, ಉತ್ಪಾದನಾ ಚಟುವಟಿಕೆಗಳ ಭೂಮಿಕೆಯ ಬಗೆಗೆ, ಸಾಮಾಜಿಕ, ರಾಜಕೀಯ ವಲಯದ ಪ್ರಜ್ಞೆ ಪ್ರಭಾವವನ್ನು ಅರುಹಿಸುವ ಶಕ್ತಿ ಓದಿಗಿದೆ.
| ಡಾ.ಭೀಮಾಶಂಕರ ಬಿರಾದಾರ ಪ್ರಾಚಾರ್ಯ