ಅಪೂರ್ಣಗೊಂಡ ರಾಮಮಂದಿರ ಉದ್ಘಾಟನೆ ಬಿಜೆಪಿಗೆ ತಿರುಗುಬಾಣ : ಸಿಎಂ ಸಿದ್ದರಾಮಯ್ಯ ಭವಿಷ್ಯ

Siddaramaiah
Published on

ಮೈಸೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಿಂದ ರಾಜಕೀಯವಾಗಿ ಅನುಕೂಲವಾಗುತ್ತದೆ ಎಂದು ಪೂರ್ಣವಾಗದ ಮಂದಿರ ವನ್ನು ಉದ್ಘಾಟಿಸಲಾಗಿದ್ದು, ಅದುವೇ ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು.

ಚುನಾವಣೆ ಸಂದರ್ಭ ಇಂತಹ ಯಾವುದೇ ವಿಚಾರ ಮುನ್ನಲೆಗೆ ತಂದರೂ ಜನರಿಗೆ ಎಲ್ಲ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ದೇಶದ ಜನರು ಜಾತ್ಯತೀತತೆಯನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ರಾಮ ಎಲ್ಲ ಜನಾಂಗದವರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಿದರು. ಶ್ರೀರಾಮನ ಕಾಲದಲ್ಲಿ ಎಲ್ಲರು ಸುಖಿಯಾದರು. ಈ ಕಾರಣಕ್ಕೆ ರಾಮರಾಜ್ಯವಾಗಬೇಕು ಎಂದು ಎಲ್ಲರು ಬಯಸುತ್ತಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದೇಶದಲ್ಲಿ ಪ್ರತಿಯೊಬ್ಬರಿಗೂ ಅವರವರ ಧರ್ಮ ಆಚರಣೆಗೆ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಯಾರು ಸಹ ಒಬ್ಬರ ಆಚರಣೆಗೆ ಅಡ್ಡ ಬರಬಾರದು. ಪ್ರತಿಯೊಂದು ಧರ್ಮಗಳು ಮನುಷ್ಯತ್ವವನ್ನೇ ಭೋಧಿಸಿವೆ. ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕೇ ಹೊರತು ಧ್ವೇಷಿಸಬಾರದು ಎಂದರು.

ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನ ಕಾರ್ಯಸಾಧುವೇ ಎಂದು ನೋಡಬೇಕಾಗಿದೆ. ಈ ಪರಿಕಲ್ಪನೆ ಸಂವಿಧಾನ ಆಶಯಕ್ಕೆ ಪೂರಕವಾಗಿದೆಯೇ ಎಂದು ಸಹ ನೋಡಬೇಕಾಗಿದೆ. ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನೂ ಮಾಡಬಾರದು. ಸಂವಿಧಾನ ರಕ್ಷಣೆಯಾದರೆ ಎಲ್ಲ ಜನರು ರಕ್ಷಣೆಯಾದಂತೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಸಂವಿಧಾನಕ್ಕೆ ಧಕ್ಕೆ ತರುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಸ್ಸಾಂನಲ್ಲಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಹಮ್ಮಿಕೊಂಡ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ. ಎಫ್‌ಐಆರ್ ದಾಖಲಿಸಿ ಪಾದಯಾತ್ರೆ ತಡೆಯುವುದು ಸರಿಯಲ್ಲ. ಇದು ಯಾತ್ರೆಯನ್ನು ತಡೆದವರಿಗೆ ತಿರುಗುಬಾಣವಾಗಲಿದೆ. ಎಫ್‌ಐಆರ್‌ಅನ್ನು ಉದ್ದೇಶಪೂರ್ವಕವಾಗಿ ದಾಖಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೈಕಮಾಂಡ್ ಒಪ್ಪಿಗೆ ಸೂಚಿಸಿದ ಕೂಡಲೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗುವುದು. ನೇಮಕಾತಿ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೈಕಮಾಂಡ್ ಒಪ್ಪಿಗೆ ಮಾತ್ರ ಬಾಕಿ ಇದೆ ಎಂದರು. ಇಂಡಿಯಾ ಒಕ್ಕೂಟದ ಬಿರುಕಿನ ಕುರಿತು ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಾನು ಇಂಡಿಯಾ ಒಕ್ಕೂಟದ ಸದಸ್ಯನಲ್ಲದ ಹಿನ್ನೆಲೆಯಲ್ಲಿ ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net