

ಉಡುಪಿ: ಕರಾವಳಿ ಭಾಗದಲ್ಲಿ ಪ್ರಗತಿಶೀಲ ಚಳುವಳಿಯನ್ನು ಸಾಹಿತಿ ನಿರಂಜನ ಬೆಳೆಸಿದ್ದಾರೆ. ಸಾಹಿತಿಗಳು ಯುವಜನರಿಗೆ ಅರಿವು ಮೂಡಿಸುವ ಸಂವಾಹಕರಾಗಬೇಕು. ಕನ್ನಡದ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ತಿಳಿಸಬೇಕು. ಕನ್ನಡ ಪ್ರಧ್ಯಾಪಕರು ತರಗತಿಗಳಿಗೆ ಮಾತ್ರ ಸೀಮಿತವಾಗಬಾರದು. ಪ್ರಗತಿಪರ ಚಿಂತನೆಯನ್ನು ಹೊರಜಗತ್ತಿಗೆ ತಿಳಿಸಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ರಥಬೀದಿ ಗೆಳೆಯರು ಸಂಸ್ಥೆಗಳ ಆಶ್ರಯದಲ್ಲಿ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ "ನಿರಂಜನರ ನೂರರ ನೆನಪು" ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಅಕಾಡೆಮಿ ವತಿಯಿಂದ ಯುವಜನರಲ್ಲ್ಲಿ ಸಂವಿಧಾನ, ಕನ್ನಡ ಪರಂಪರೆ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಕನ್ನಡ ಮಹತ್ವದ ಲೇಕಖರನ್ನು ಪರಿಚಯಿಸುವ ನಿಟ್ಟಿನಲ್ಲಿ ಚಕೋರ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ತಿಂಗಳು ಯಾವುದಾದರೂ ಒಂದು ಜಿಲ್ಲೆಯಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಹಿರಿಯ ಸಾಹಿತಿ ಎಸ್. ಜಿ. ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿ, ಕರ್ಮಸಿದ್ಧಾಂತದ ನೆಲೆಯೊಳಗೆ ಸಂವೇದನೆ ಗೌರವಿಸದೇ ಹೋದರೆ ಚರಿತ್ರೆಯನ್ನು ಗ್ರಹಿಸಲು ಸಾಧ್ಯವಿಲ್ಲ.12ನೇ ಶತಮಾನದಲ್ಲಿ ಬಸವಣ್ಣನವರ ವಚನ ಚಳುವಳಿ ನಿಜಾರ್ಥದಲ್ಲಿ ಕಾರ್ಮಿಕರ ಕಾಯಕ ಚಳುವಳಿ. ಈ ಮೂಲಕ ಸಮ ಸಮಾಜ ನಿರ್ಮಾಣ ಗುರಿಯಾಗಿತ್ತು. ಚಾತುರ್ವಣ ವ್ಯವಸ್ಥೆಯನ್ನು ಪಂಪ ವಿರೋಧಿಸಿದ್ದ. ಹೀಗೆ ಕನ್ನಡದಲ್ಲಿ ಸಹಿತ ಅನೇಕ ಕವಿಗಳು ಹಳೆ ಸಂಪ್ರದಾಯವನ್ನು ಬದಿಗೊತ್ತಿ ಹೊಸ ಸಿದ್ಧಾಂತ ಸ್ಥಾಪಿಸಿದ್ದಾರೆ. ಮುರಿದು ಕಟ್ಟುವ ಕಾರ್ಯವನ್ನು ಮಾಡಿದ್ದಾರೆ. ಕುವೆಂಪು ಪಂಪನ ಹಾದಿಯಲ್ಲಿ ಸಾಗಿದ್ದು, ಬಸವಣ್ಣನವರಂತೆ ಆತ್ಮವಿಮರ್ಶಾ ಗುಣ ಹೊಂದಿದ್ದರು ಎಂದರು.
ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಆಶಯ ಭಾಷಣ ಮಾಡಿದರು. ರಥಬೀದಿ ಗೆಳೆಯರು ಸಂಸ್ಥೆ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ , ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಜಯಪ್ರಕಾಶ್ ಶೆಟ್ಟಿ ಎಚ್., ರಥಬೀದಿ ಗೆಳೆಯರು ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ, ಕನ್ನಡ ಮತ್ತು ಸಂಸತಿ ಇಲಾಖೆಯ ಪೂರ್ಣಿಮಾ ಉಪಸ್ಥಿತರಿದ್ದರು.