ಅಕ್ಟೋಬರ್​ಗೆ ತಾಯಿ ಮತ್ತು ಮಗು ಆಸ್ಪತ್ರೆ ಉದ್ಘಾಟನೆ

22 web 2
Published on

ಹೊಸಕೋಟೆ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಹೆಚ್ಚಿನ ಅನುದಾನಗಳನ್ನು ಒದಗಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ತಿಳಿಸಿದರು.
ತಾಲೂಕಿನ ಕೊಳತೂರು ಸಮೀಪ ನಿರ್ಮಾಣ ಹಂತದಲ್ಲಿರುವ 100 ಹಾಸಿಗೆಗಳ ತಾಯಿ&ಮಗು ಆಸ್ಪತ್ರೆ ಕಾಮಗಾರಿ ಪರಿಶೀಲಿಸಿ ಬುಧವಾರ ಮಾತನಾಡಿದರು.
40 ಕೋಟಿ ರೂ. ವೆಚ್ಚದಲ್ಲಿ ತಾಯಿ&ಮಗು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದ್ದು, ನಬಾರ್ಡ್​ನಿಂದ 37 ಕೋಟಿ ರೂಪಾಯಿ ಕಟ್ಟಡ ನಿರ್ಮಾಣಕ್ಕೆ, 3 ಕೋಟಿ ರೂ.ವೆಚ್ಚದಲ್ಲಿ ಯಂತ್ರೋಪಕರಣಗಳ ಖರೀದಿ ಮಾಡಲಿದ್ದೇವೆ. ಅಕ್ಟೋಬರ್​ನಲ್ಲಿ ಆಸ್ಪತ್ರೆ ಉದ್ಘಾಟನೆಗೆ ಸಿದ್ಧವಾಗಲಿದೆ. ಅಷ್ಟೇ ಅಲ್ಲದೆ ಇದೇ ಆಸ್ಪತ್ರೆ ಆವರಣದಲ್ಲಿ ಹೊಸ ತಾಲೂಕು ಆಸ್ಪತ್ರೆಗೆ ಅಡಿಗಲ್ಲೂ ಹಾಕಲಿದ್ದೇವೆ ಎಂದರು.


ಪ್ರಮುಖವಾಗಿ ಆಸ್ಪತ್ರೆಗಳ ನಿರ್ಮಾಣದ ಜತೆಗೆ ಅಗತ್ಯ ಸಿಬ್ಬಂದಿ ಒದಗಿಸಿ, ಗುಣಮಟ್ಟದ ಸೇವೆ ಒದಗಿಸುವುದೂ ಅಷ್ಟೇ ಮುಖ್ಯ. ಆ ಕಾರ್ಯವನ್ನೂ ಪರಿಣಾಮಕಾರಿಯಾಗಿ ಮಾಡಲಿದೆ ಎಂದು ಹೇಳಿದರು. ಶಾಸಕ ಶರತ್​ ಬಚ್ಚೇಗೌಡ ಮಾತನಾಡಿ, ಹೊಸಕೋಟೆ, ಬೆಂಗಳೂರು ನಗರದ ಹತ್ತಿರ ಇರುವ ಕಾರಣ ತ್ವರಿತವಾಗಿ ಬೆಳವಣಿಗೆ ಕಾಣುತ್ತಿದೆ. ಆದ್ದರಿಂದ ಅನುಗೊಂಡನಹಳ್ಳಿ ಹಾಗೂ ಸೂಲಿಬೆಲೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ತಾಲೂಕಿನಲ್ಲಿರುವ 26 ಉಪಕೇಂದ್ರಗಳಿಗೆ ಸ್ವಂತ ಕಟ್ಟಡ ಭಾಗ್ಯವಿಲ್ಲ. ಆದ್ದರಿಂದ ಸ್ವಂತ ಕಟ್ಟಡ ಲಭಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅಗತ್ಯವಾದ ಎಲ್ಲ ಅನುದಾನವನ್ನು ಒದಗಿಸಬೇಕು. ಹೊಸಕೋಟೆ ತಾಲೂಕು ಆಸ್ಪತ್ರೆಗೆ ಸೀಟಿ ಸ್ಕಾ$್ಯನಿಂಗ್​ ಯಂತ್ರವನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಸುನಿಲ್​ ಕುಮಾರ್​, ತಾಲೂಕು ಆರೋಗ್ಯ ಅಧಿಕಾರಿ ವೀಣಾ, ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್​, ಬಿ.ಎಂ.ಆರ್​.ಡಿ.ಸದಸ್ಯ ಸುಬ್ಬರಾಜು, ಉದ್ಯಮಿ ಬೈರೇಗೌಡ ಇತರರಿದ್ದರು.

ರಾಜ್ಯಪಾಲರಿಂದ ಪಪಾತ ಸರಿಯಲ್ಲ. ಬಿಜೆಪಿಯವರ ರಾಜಕೀಯ ಕುತಂತ್ರದಲ್ಲಿ ರಾಜ್ಯಪಾಲರು ನೇರವಾಗಿ ಭಾಗಿಯಾಗಿದ್ದಾರೆ. ಒಂದು ದೊಡ್ಡ ಹುದ್ದೆಯಲ್ಲಿರುವವರು ಸಣ್ಣ ಕೆಲಸ ಮಾಡಿದ್ದಾರೆ. ರಾಜ್ಯಪಾಲರು ತಮ್ಮ ಸ್ಥಾನದ ಬೆಲೆ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡುವ ಮೂಲಕ ಕೇಂದ್ರ ಬಿಜೆಪಿಯ ಒತ್ತಡಕ್ಕೆ ಮಣಿದಿರಬಹುದು.
ದಿನೇಶ್​ ಗುಂಡೂರಾವ್​ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net