ಜನರ ಅನುಕೂಲಕ್ಕಾಗಿ ಗ್ಯಾರಂಟಿ ಜಾರಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Inauguration of the dairy building in Arealpahalli village Mandya
Published on

ನಾಗಮಂಗಲ: ಎಲ್ಲ ವರ್ಗಗಳ ಜನರ ಅನುಕೂಲಕ್ಕಾಗಿ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ಇಂತಹ ಯೋಜನೆಗಳನ್ನು ಏಕೆ ಕೊಡಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.

ತಾಲೂಕಿನ ಅರೆಅಲ್ಪಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಬಾಯಿ ಚಪಲಕ್ಕೆ ಮಾತನಾಡುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈ ಹಿಂದೆ ರಾಜ್ಯದಲ್ಲಿ ಕಳೆದ ಐದು ವರ್ಷ ಆಡಳಿತ ನಡೆಸಿದಾಗ ಜನಪರ ಯೋಜನೆಗಳನ್ನು ಜನರಿಗೆ ನೀಡಿಲ್ಲ. ಮಾಜಿ ಸಿಎಂಗಳಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ರೈತರಿಗೆ ಸಹಾಯ ಮಾಡುವ ಮನಸ್ಸಿರಲಿಲ್ಲ. ಸಿಎಂ ಸಿದ್ದರಾಮಯ್ಯ ನೇತತ್ವದಲ್ಲಿ ಎಷ್ಟೆಲ್ಲ ಯೋಜನೆ ಜಾರಿಗೊಂಡಿವೆ ಎಂಬುದನ್ನು ಜನರು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ 13 ಲಕ್ಷ ಲೀಟರ್ ಹಾಲಿನಲ್ಲಿ 6 ಲಕ್ಷ ಲೀಟರ್ ಮಾರಾಟವಾಗಿ ಇನ್ನುಳಿದ 7ಲಕ್ಷ ಲೀಟರ್ ಹಾಲಿನಲ್ಲಿ ನಂದಿನಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಗ್ರಾಹಕರು ಖರೀದಿಸುವ 1 ಲೀ. ಹಾಲಿಗೆ 4 ರೂ ಹೆಚ್ಚಳ ಮಾಡಿ ನೇರವಾಗಿ ಉತ್ಪಾದಕರಿಗೆ ಕೊಡುತ್ತಿದ್ದೇವೆ ಹೊರತು ರಾಜ್ಯ ಸರ್ಕಾರದ ಖಜಾನೆಯಲ್ಲಿ ಇಟ್ಟುಕೊಳ್ಳುತ್ತಿಲ್ಲ. ಹೈನುಗಾರಿಕೆಯಿಂದ ಗ್ರಾಮೀಣ ಪ್ರದೇಶದ ಬಹುತೇಕ ಕುಟುಂಬಕ್ಕೆ ಬಹಳಷ್ಟು ಅನುಕೂಲವಾಗುತ್ತಿದೆ. ರಾಸುಗಳನ್ನು ಹೊಂದಿರುವ ರೈತರು ಕಡ್ಡಾಯವಾಗಿ ವಿಮೆ ಮಾಡಿಸುವ ಜತೆಗೆ ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಇದರಿಂದ ಉತ್ಪಾದಕರಿಗೂ ಹೆಚ್ಚು ಲಾಭ ಸಿಗುತ್ತದೆ. ಸಂಘವೂ ಕೂಡ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ ಎಂದರು.

ಮನ್‌ಮುಲ್ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ನಿರ್ದೇಶಕರಾದ ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ, ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್, ನಾಗಮಂಗಲ ಉಪ ವ್ಯವಸ್ಥಾಪಕ ಪ್ರುಲ್‌ಗೌಡ, ಸಂಘದ ಅಧ್ಯಕ್ಷೆ ರುಕ್ಮಿಣಿ, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥಗೌಡ, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಸಂಪತ್‌ಕುಮಾರ್, ಕೊಣನೂರು ಹನುಮಂತು, ಶಶಿಕುಮಾರ್, ಸುನಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net