

ಶಾರದಾದೇವಿನಗರದ ವಿವೇಕಾನಂದ ರಸ್ತೆಯಲ್ಲಿ ನಿರ್ಮಾಣವಾಗಿರುವ ಮಹಾನಗರ ಪಾಲಿಕೆ ವಲಯ ಕಚೇರಿ-3ರ ಸುಸಜ್ಜಿತ ಕಟ್ಟಡವನ್ನು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರ ಸೇವೆಗೆ ಲೋಕಾರ್ಪಣೆ ಮಾಡಿದರು.
ಈ ವೇಳೆ ಮುಖ್ಯಮಂತ್ರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಸಾಥ್ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಕೆ.ಹರೀಶ್‌ಗೌಡ, ಎಂಎಲ್‌ಸಿ ಸಿ.ಎನ್.ಮಂಜೇಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಇತರರಿದ್ದರು.
ಶಾರದಾದೇವಿನಗರ, ಕುವೆಂಪುನಗರ, ಬೋಗಾದಿ, ರಾಮಕೃಷ್ಣನಗರ, ದಟ್ಟಗಳ್ಳಿ, ಕೆ.ಜಿ.ಕೊಪ್ಪಲು, ಸರಸ್ವತಿಪುರಂ, ನಿವೇದಿತಾನಗರ, ಟಿ.ಕೆ.ಬಡಾವಣೆ, ವಿಜಯನಗರ 3ನೇ ಹಂತದ ಸಾರ್ವಜನಿಕರ ಸೇವೆಗೆ ಸದರಿ ವಲಯ ಕಚೇರಿ ನಿರ್ಮಾಣ ಮಾಡಲಾಗಿದೆ.
1.12 ಎಕರೆ ಪ್ರದೇಶದಲ್ಲಿ 166 ಚದರ ವಿಸ್ತೀರ್ಣದ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡ ಇದಾಗಿದ್ದು, 6.5 ಕೋಟಿ ರೂ. ವೆಚ್ಚದಲ್ಲಿ ಸುಂದರ ವಿನ್ಯಾಸದೊಂದಿಗೆ ಅತ್ಯಾಕರ್ಷವಾಗಿ ನಿರ್ಮಿಸಲಾಗಿದೆ. ಸುತ್ತಲೂ ಇರುವ ಉದ್ಯಾನವನ ಕಟ್ಟಡಕ್ಕೆ ಮತ್ತಷ್ಟು ಮೆರುಗು ತಂದಿದೆ. ಅಂಗವಿಕಲರಿಗೆ ರ‌್ಯಾಂಪ್, ಶೌಚಗೃಹ, ಸಾರ್ವಜನಿಕರ ಅನುಕೂಲಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪುಟ್ಟ ಮಕ್ಕಳ ಆರೈಕೆಗೆ ಶಿಶುಪಾಲನಾ ಕೇಂದ್ರ (ಕೂಸು ಮನೆ), ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ, ಕಡತಗಳ ಸಂರಕ್ಷಣೆಗೆ ವ್ಯವಸ್ಥಿತ ಕಪಾಟುಗಳನ್ನೊಳಗೊಂಡ ದಾಖಲಾತಿ ಕೊಠಡಿ ನಿರ್ಮಿಸಲಾಗಿದೆ.
ಕಂದಾಯ, ಆರೋಗ್ಯ, ಇಂಜಿನಿಯರಿಂಗ್, ಕಂಪ್ಯೂಟರ್ ವಿಭಾಗ ಸೇರಿದಂತೆ ಆಯಾಯ ಅಧಿಕಾರಿ, ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಕೊಠಡಿಗಳನ್ನು ನಿರ್ಮಿಸಿದ್ದು, 150 ಸಿಬ್ಬಂದಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಜತೆಗೆ 60 ಮಂದಿ ಕುಳಿತು ಸಭೆ ನಡೆಸಬಹುದಾದ ಸುಸಜ್ಜಿತ ಸಭಾಂಗಣವೂ ಇದೆ. ಸಾರ್ವಜನಿಕರು, ಹಿರಿಯ ನಾಗರಿಕರು ಮೊದಲ ಅಂತಸ್ತಿಗೆ ತೆರಳಲು ಲಿಫ್ಟ್ ವ್ಯವಸ್ಥೆ ಇದ್ದು, ಸಾರ್ವಜನಿಕರ ವಾಹನಗಳ ಪಾರ್ಕಿಂಗ್‌ಗೆ ವಿಶಾಲ ಸ್ಥಳಾವಕಾಶವನ್ನೂ ಕಲ್ಪಿಸಲಾಗಿದೆ.