

ಉಳ್ಳಾಲ: ಪ್ರಾಥಮಿಕ ಶಾಲೆಯ ಸನಿಹದಲ್ಲೇ ಅಂಗನವಾಡಿ ಆರಂಭಿಸಲು ಮೊದಲ ಆದ್ಯತೆ ನೀಡಬೇಕು. ಊರಿನ ಮಕ್ಕಳ ಅಭಿವೃದ್ಧಿಗಾಗಿ ಶಾಲೆ ಅಥವಾ ಇತರ ಯೋಜನೆಗಳನ್ನು ತರುವಾಗ ನ್ಯಾಯಾಲಯಕ್ಕೆ ಹೋಗಿ ಅಡ್ಡಿಪಡಿಸುವುದು ಸಲ್ಲದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಕಿನ್ಯ ಗ್ರಾಮದ ಬೆಳರಿಂಗೆಯಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಒಂದೂವರೆ ವರ್ಷದ ಹಿಂದೆ ಕಟ್ಟಡ ಶಿಥಿಲಗೊಂಡು ಬಿದ್ದ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅತ್ಯಲ್ಪ ಅವಧಿಯಲ್ಲೇ ಹೊಸ ಕಟ್ಟಡ ನಿರ್ಮಿಸಲಾಗಿದೆ. ಮುಂದಕ್ಕೆ ಆವರಣ ಗೋಡೆ, ಶೌಚಗೃಹ, ಚಪ್ಪರ ಸಹಿತ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿ ಮಾದರಿಯನ್ನಾಗಿ ರೂಪಿಸಲಾಗುವುದು. ಪಾಲಕರು ಮಕ್ಕಳನ್ನು ಪ್ರತಿದಿನ ಅಂಗನವಾಡಿಗೆ ಕಳಿಸಬೇಕೇ ಹೊರತು ಮನಸ್ಸು ಬಂದಾಗ ಮಾತ್ರ ಅಲ್ಲ. ಶಿಕ್ಷಕರಿಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು.
ಕಿನ್ಯ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಫಾರೂಕ್ ಕಿನ್ಯ, ಮಾಜಿ ಉಪಾಧ್ಯಕ್ಷ ಸಿರಾಜ್ ಕಿನ್ಯ, ಕೆಡಿಪಿ ಜಿಲ್ಲಾ ಸದಸ್ಯ ಹಮೀದ್ ಕಿನ್ಯ, ಗ್ರಾ.ಪಂ. ಪಿಡಿಒ ತುಳಸಿ, ಸದಸ್ಯರಾದ ಫಯಾಝ್, ಮೊಯಿದ್ದೀನ್ ಕುಂಞಿ, ಮಾಜಿ ಸದಸ್ಯ ಅಬ್ಬು, ಸ್ಥಳೀಯ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್, ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಪೂಜಾರಿ, ಅಂಗನವಾಡಿ ಸುಪರ್ವೈಸರ್ಗಳಾದ ಶಂಕರಿ, ಶಾಲಿನಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್.ಈಶ್ವರ್, ಅಂಗನವಾಡಿ ಶಿಕ್ಷಕಿಯರಾದ ಗುಲಾಬಿ, ವಿಶಾಲಾಕ್ಷಿ ರೇವತಿ, ಸುಜಾತಾ, ಗುಣವತಿ, ಸಹಾಯಕಿಯರಾದ ಲೋಲಾಕ್ಷಿ, ರೇಣುಕಾ, ಸುಜಾತಾ, ರಾಜೇಶ್ವರಿ ಇನ್ನಿತರರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶೈಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಚೇರಿಗೆ ಮನವಿ
ಉಳ್ಳಾಲದಿಂದ ಮಂಗಳೂರಿಗೆ ಬರಲು ದೂರವಾಗುತ್ತಿದೆ. ಆ ನಿಟ್ಟಿನಲ್ಲಿ ಉಳ್ಳಾಲದಲ್ಲೇ ಸಿಡಿಪಿಒ ಕಚೇರಿ ಮಾಡಿ ಎಂದು ಸುಪರ್ವೈಸರ್ ಶಂಕರಿ ಮನವಿ ಮಾಡಿದರು. ಈಗಾಗಲೇ ತಾಲೂಕಿನಲ್ಲಿ ಅಗ್ನಿಶಾಮಕ ಕಟ್ಟಡ, ವಾಹನ ಚಾಲನಾ ಪರಿಶೀಲನಾ ಕೇಂದ್ರ ಆರಂಭವಾಗಲಿದೆ. ಮುಂದಕ್ಕೆ ಎಲ್ಲ ವ್ಯವಸ್ಥೆ ಆಗಲಿದೆ ಎಂದು ಖಾದರ್ ಭರವಸೆ ನೀಡಿದರು.