

ವಿಜಯವಾಣಿ ಸುದ್ದಿಜಾಲ ಉಡುಪಿ
ಶ್ರೇಷ್ಠವಾದ ಪಾರಂಪರಿಕ ಯಕ್ಷಗಾನ ಕಲೆ ಉಳಿಸುವಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಕೋಟದ ಸ್ಥಾಪಕ ಎಚ್.ಶ್ರೀಧರ್ ಹಂದೆ ಕೊಡುಗೆ ಅನನ್ಯ. ಐದು ದಶಕದಿಂದ ಅವರು ಮಕ್ಕಳಿಗೆ ನಿರಂತರವಾಗಿ ಪಾರಂಪರಿಕ ಶೈಲಿಯ ಯಕ್ಷಗಾನವನ್ನೇ ಕಲಿಸುತ್ತಿದ್ದಾರೆ. ಕಲಾವಿದರಿಗೆ ಈ ಮೊದಲು 200-300ರೂ. ವೇತನ ಇರುತ್ತಿತ್ತು. ಇದೀಗ 3ರಿಂದ 5 ಸಾವಿರಕ್ಕೆ ಏರಿಕೆಯಾಗಿದೆ. ಇದು ಸಂತಸದ ವಿಚಾರವಾದರೂ ಯಕ್ಷಗಾನ ಸಿನಿಮೀಯ ಶೈಲಿಯತ್ತ ವಾಲುತ್ತಿದ್ದು, ಮೌಲ್ಯ ಕುಸಿಯುತ್ತಿದೆ. ಕಲಾವಿದರು ಯಕ್ಷಗಾನದ ಚೌಕಟ್ಟು, ಪರಂಪರೆ ಮುರಿಯಬಾರದು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಕೋಟ ಇದರ 50ನೇ ವಾರ್ಷಿಕೋತ್ಸವದ ನಿಮಿತ್ತ ಭಾನುವಾರ ಆಯೋಜಿಸಿದ್ದ ಸುವರ್ಣ ಪರ್ವ- 8 ಹಾಗೂ ಮಕ್ಕಳ ಯಕ್ಷಗಾನ ರಂಗಭೂಮಿ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕಲಾಪೋಷಕರಾದ ಲಯನ್ ಸುರೇಶ್ ಪ್ರಭು, ಭುವನಪ್ರಸಾದ್ ಹೆಗ್ಡೆ, ಲಯನ್ ವಿ.ಜಿ. ಶೆಟ್ಟಿ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ಎಚ್.ಶ್ರೀಧರ್ ಹಂದೆ, ಅಧ್ಯಕ್ಷ ಬಲರಾಮ್ ಕಲ್ಕೂರ ಕೆ., ಉಪಾಧ್ಯಕ್ಷ ಎಚ್.ಜನಾರ್ದನ್ ಹಂದೆ ಉಪಸ್ಥಿತರಿದ್ದರು.
ಮೇಳದ ಕಾರ್ಯದರ್ಶಿ ಎಚ್.ಸುಜಯೀಂದ್ರ ಹಂದೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. 50 ವರ್ಷದ ಹಿಂದೆ ಮಕ್ಕಳ ಮೇಳದಲ್ಲಿ ಪಾತ್ರ ನಿರ್ವಹಿಸಿದ್ದ ಮೋಹನದಾಸ್ ಶ್ಯಾನಭಾಗ್ ಅತಿಥಿಗಳನ್ನು ಗೌರವಿಸಿದರು. ವಿನುತಾ ಎಸ್. ಹಂದೆ ಕಾರ್ಯಕ್ರಮ ನಿರ್ವಹಿಸಿದರು.
ಯಕ್ಷಗಾನ ಗುರು ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ್ ಅಧ್ಯಕ್ಷತೆಯಲ್ಲಿ ಮಕ್ಕಳ ಯಕ್ಷಗಾನ ವಿಷಯ ಕುರಿತು ವಿಚಾರ ಗೋಷ್ಠಿ ನಡೆಯಿತು. ಪಾರ್ಥಿಸುಬ್ಬ ಪ್ರಶಸ್ತಿ ಪುರಸ್ಕೃತ ಪ್ರಸಂಗ ಸಾಹಿತಿ ಪ್ರೊ. ಶ್ರೀಧರ್ ಡಿ.ಎಸ್. ಪ್ರಸಂಗ ಸಾಹಿತ್ಯ ಕುರಿತು, ಯಕ್ಷಗರು ಪ್ರಸಾದಕುಮಾರ್ ಮೊಗಬೆಟ್ಟು ತರಬೇತಿಯ ಸವಾಲುಗಳು ಕುರಿತು, ರಂಗಕರ್ಮಿ ಅಭಿಲಾಷ್ ಎಸ್. ರಂಗ ಪ್ರಸ್ತುತತೆ ಕುರಿತು ವಿಚಾರ ಮಂಡಿಸಿದರು. ತೆಕ್ಕಟ್ಟೆ ಯಶಸ್ವಿ ಕಲಾವೃಂದದ ಯಕ್ಷಗಾನ ಗುರು ದೇವದಾಸ್ ರಾವ್ ಕೊಡ್ಲಿ ಹಾಗೂ ಪತ್ರಕರ್ತೆ ರಾಜಲಕ್ಷ್ಮೀ ಕೋಡಿಬೆಟ್ಟು ಪ್ರತಿಸ್ಪಂದನ ನಿರ್ವಹಿಸಿದರು. ಬಳಿಕ ರಾಜೇಶ್ ಕಟೀಲು ನಿರ್ದೇಶನದಲ್ಲಿ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಅವರಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.