

ಉಡುಪಿ: ಥಲಸ್ಸೆಮಿಯಾ ಒಂದು ಆನುವಂಶಿಕ ರಕ್ತದ ಕಾಯಿಲೆಯಾಗಿದೆ. ಈ ಅಸ್ವಸ್ಥತೆಯಲ್ಲಿ ರೋಗಿಯು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆದ್ದರಿಂದ, ಈ ಖಾಯಿಲೆ ಇರುವವರು ರಕ್ತ ಹೀನತೆಯಿಂದ ಬಳಲುತ್ತಾರೆ. ಜೀವನಪರ್ಯಂತ ನಿಯಮಿತ ರಕ್ತ ವರ್ಗಾವಣೆಯ ಮೇಲೆ ಅವಲಂಬಿತರಾಗಿರುತ್ತಾರೆ. ಹೀಗಾಗಿ ಥಲಸ್ಸೆಮಿಯಾ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮ ಆರೈಕೆ ಮತ್ತು ಚಿಕಿತ್ಸೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ವೀಣಾ ಕುಮಾರಿ ಹೇಳಿದರು.
ಮಣಿಪಾಲ ಕೆಎಂಸಿಯಲ್ಲಿ ಥಲಸ್ಸೇಮಿಯಾ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು. ಡೀನ್ ಡಾ.ಪದ್ಮರಾಜ್ ಹೆಗ್ಡೆ ಮಾತನಾಡಿ, ಬಹಳಷ್ಟು ಸಂಘ ಸಂಸ್ಥೆಗಳ ಬೆಂಬಲದಿಂದ ಕೆಎಂಸಿಯಲ್ಲಿ ಬಡ ಮಕ್ಕಳಿಗೆ ಮೂಳೆ ಮಜ್ಜೆಯ ಕಸಿ ಮಾಡಲು ಅನುವು ಮಾಡಿಕೊಡಲಾಗಿದೆ ಎಂದರು.
ಮಣಿಪಾಲದ ಕೆಎಂಸಿಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ವಾಸುದೇವ ಭಟ್ ಕೆ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಡಾ.ಅರ್ಚನಾ ಎಂ.ವಿ ಸಮಗ್ರ ಥಲಸ್ಸೆಮಿಯಾ ಚಿಕಿತ್ಸಾಲಯ ಅವಲೋಕನವನ್ನು ನೀಡಿ, ಪ್ರತಿ ತಿಂಗಳ 2ನೇ ಶನಿವಾರ ಕ್ಲಿನಿಕ್ ಕಾರ್ಯನಿರ್ವಹಿಸಲಿದ್ದು, ಉಡುಪಿ ಮತ್ತು ನೆರೆಯ ಜಿಲ್ಲೆಗಳ ರೋಗಿಗಳಿಗೆ ಸೇವೆ ಒದಗಿಸಲಿದೆ ಎಂದು ಹೇಳಿದರು.
ಉಪ ವೈದ್ಯಕಿಯ ಅಧೀಕ್ಷಕ ಡಾ.ಶಿರನ್ ಶೆಟ್ಟಿ ವಂದಿಸಿದರು. ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಡಾ.ಸ್ವಾತಿ ಪಿ.ಎಂ ಕಾರ್ಯಕ್ರಮ ನಿರ್ವಹಿಸಿದರು.