ಆಧ್ಯಾತ್ಮಿಕ ಚಿಂತನೆಯಿಂದ ಮಾನವ ಜನ್ಮ ಸಾರ್ಥಕ

29ss1swamyji udgatane
ಮೂದರವಳ್ಳಿ ಈಶ್ವರ ಮತ್ತು ಕಟ್ಟೆ ಬಸವಣ್ಣ ಸ್ವಾಮಿ ಜೀರ್ಣೋದ್ಧಾರಗೊಂಡಿರುವ ನೂತನ ದೇವಸ್ಥಾನಗಳ ಉದ್ಘಾಟನೆ ಮತ್ತು ಧಾರ್ಮಿಕ ಕಾರ್ಯಕ್ರಮವನ್ನು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮಿಜಿ ಉದ್ಘಾಟಿಸಿದರು.
Published on

ಶನಿವಾರಸಂತೆ: ಸನಾತನ ಸಂಸ್ಕೃತಿ, ಧಾರ್ಮಿಕ ಕಾರ್ಯಗಳು ಆಧ್ಯಾತ್ಮಿಕ ಚಿಂತನೆಯಿಂದ ಮಾನವ ಜನ್ಮ ಸಾರ್ಥಕಗೊಳ್ಳುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಹಾಸನ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ಸಮೀಪದ ಮೂದರವಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಇತಿಹಾಸ ಪ್ರಸಿದ್ಧ ಶ್ರೀ ಈಶ್ವರ ಮತ್ತು ಕಟ್ಟೆ ಬಸವಣ್ಣ ಸ್ವಾಮಿ ದೇವಸ್ಥಾನಗಳ ಪ್ರತಿಷ್ಠಾಪನೆ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮಾನವನಲ್ಲಿ ಜ್ಞಾನದ ಬೆಳಕು ಇದ್ದಲ್ಲಿ ಬದುಕು ಸಾರ್ಥಕಗೊಳ್ಳುತ್ತದೆ. ಜ್ಞಾನದ ಶುದ್ಧಿ, ಧಾರ್ಮಿಕ ಕಾರ್ಯಗಳಿಂದಲೂ ಬದುಕು ಹಸನಾಗುತ್ತದೆ. ಗುರು-ಹಿರಿಯರು ನೀಡುವ ಮಾರ್ಗದರ್ಶನ ಮತ್ತು ಅವರು ನೀಡಿದ ಜ್ಞಾನದ ಶುದ್ಧಿಯಿಂದ ನಾವು ಭಗವಂತನನ್ನು ಕಾಣಬಹುದು. ಕೆಲವರು ಭಯದಿಂದ, ಮತ್ತೆ ಕೆಲವರು ಭಕ್ತಿಯಿಂದ ತಾನಾಗಿಯೇ ಭಗವಂತನನ್ನು ಕಾಣುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯವನ್ನು ಮಾಡುವ ಮೂಲಕ ಭಗವಂತನನ್ನು ಕಾಣಬೇಕು ಎಂದರು.

ಪ್ರತಿಯೊಬ್ಬರೂ ಮನೆಯಲ್ಲಿ ತಾಯಿ ಸೇರಿದಂತೆ ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು. ಇದರಿಂದ ಮನೆ ದೇಗುಲವಾಗುತ್ತದೆ. ಜ್ಞಾನದ ಬೆಳಕಿಗೆ ಮನುಷ್ಯನಲ್ಲಿರುವ ದ್ವೇಷವನ್ನು ನಾಶ ಮಾಡುವ ಶಕ್ತಿ ಇದೆ. ಈ ನಿಟ್ಟಿನಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಮನೆಯಲ್ಲಿ ಪಾಲಕರು ಮಕ್ಕಳಿಗೆ ಗುರು ಹಿರಿಯರಿಗೆ ಗೌರವ ಕೊಡುವುದನ್ನು ಹಾಗೂ ಕರುಣೆ, ಅಂತಃಕರಣ ಮುಂತಾದ ಮೌಲ್ಯಗಳನ್ನು ಕಲಿಸಿಕೊಡುುದರ ಜತೆಗೆ ಧಾರ್ಮಿಕ ಚಿಂತನೆಯನ್ನು ಹೇಳಿಕೊಡಬೇಕು. ಇದರಿಂದ ಧಾರ್ಮಿಕ ಸಂಸ್ಕೃತಿ ಉಳಿಯುತ್ತದೆ ಎಂದು ತಿಳಿಸಿದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ, ದೇಗುಲಗಳನ್ನು ಕಟ್ಟಿದರೆ ಸಾಲದು, ವಾರದಲ್ಲಿ ಒಂದು ದಿನವಾದರೂ ದೇವಾಲಯಕ್ಕೆ ಬಂದು ದೇವರ ಆಶೀರ್ವಾದ ಪಡೆದುಕೊಳ್ಳಬೇಕು. ಇದರಿಂದ ಮನಸ್ಸಿನಲ್ಲಿ ನೆಮ್ಮದಿ ಕಾಣಲು ಸಾಧ್ಯ. ಗ್ರಾಮಗಳಲ್ಲಿ ಕಟ್ಟುವ ದೇವಸ್ಥಾನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು ಸಹ ಸಮಿತಿಯ ಜವಾಬ್ದಾರಿ. ಈ ನಿಟ್ಟಿನಲ್ಲಿ ದೇವಸ್ಥಾನ ಸಮಿತಿಯವರು ಶ್ರಮಿಸಿದರೆ ದೇಗುಲಗಳು ಅಭಿವೃದ್ಧಿ ಹೊಂದಲಿವೆ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಜಿಪಂ ಮಾಜಿ ಸದಸ್ಯ ಸಿ.ಪಿ.ಪುಟ್ಟರಾಜು ಮಾತನಾಡಿದರು. ಶುಂಠಿ ಭರತ್‌ಕುಮಾರ್, ಕಳಲೆ ಕೃಷ್ಣೇಗೌಡ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್, ಯುವ ವೇದಿಕೆ ತಾಲೂಕು ಅಧ್ಯಕ್ಷ ಸುರೇಶ್ ಚಕ್ರವರ್ತಿ, ಬಾಗೇರಿ ಮಧು, ಎಂ.ಪಿ.ದಿನೇಶ್, ರೋಹಿತ್, ಪ್ರವೀಣ್, ಹಂಡ್ಲಿ ಗ್ರಾಪಂ ಅಧ್ಯಕ್ಷೆ ಸುಧಾ, ಸದಸ್ಯೆ ಸುವರ್ಣ, ಕೆ.ಪಿ.ಜಯಕುಮಾರ್, ಈಶ್ವರ ಮತ್ತು ಕಟ್ಟೆ ಬಸವಣ್ಣ ದೇವಸ್ಥಾನ ಸಮಿತಿದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net