

ತಿ.ನರಸೀಪುರ: ಭಗವಂತ ಮತ್ತು ಭಕ್ತರ ನಡುವೆ ನೇರವಾದ ಅವಿನಾಭಾವ ಸಂಬಂಧವಿರಬೇಕು ಎಂಬ ಉದ್ದೇಶದಿಂದಲೇ ಧಾರ್ಮಿಕ ಆಚರಣೆಯಲ್ಲಿ ಶಿವಲಿಂಗ ಪರಿಕಲ್ಪನೆ ಹುಟ್ಟಿಕೊಂಡಿತು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ಶನಿವಾರ ಶ್ರೀ ಗುರು ಮಲ್ಲೇಶ್ವರ ಭಿಕ್ಷದ ದಾಸೋಹ ಮಠದ ವೀರತ್ತ ಸೇವಾ ಪ್ರತಿಷ್ಠಾನ ಟ್ರಸ್ಟ್‌ನ ಎಸ್.ವಿ.ಎಸ್ ಸಭಾ ಭವನ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಧ್ಯವರ್ತಿಗಳ ಮೂಲಕವಾಗುವ ಧರ್ಮಾಚರಣೆ, ಸಲ್ಲಿಸುವ ಪೂಜೆ ಸರಿಯಲ್ಲ. ಭಗವಂತನನ್ನು ಅವರವರೇ ಪೂಜಿಸಿ, ಆರಾಧಿಸಿದಾಗಲೇ ದೇವರ ಕೃಪೆ ಸಿದ್ಧಿಸಲಿದೆ ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಬದಲಾವಣೆಗೆ ವಿಶೇಷವಾದ ಪ್ರಯತ್ನಪಟ್ಟರು. ಸಮಾನತೆ ಸುಧಾರಣೆಗಳು ಜಗತ್ತಿನಲ್ಲಿ ಬಹುತೇಕ ರಾಷ್ಟ್ರಗಳಲ್ಲಿ ನೆಲೆ ನಿಂತಿಲ್ಲ. ಆಧ್ಯಾತ್ಮಿಕ ಸಿಂಚನ, ಧರ್ಮದ ತಳಹದಿಯ ಮೇಲೆ ಜನರನ್ನು ಸರಿದಾರಿಗೆ ತರಲು ಪ್ರಯತ್ನ ಮಾಡಿದ್ದರ ಫಲವಾಗಿ ಬಸವಣ್ಣನವರ ಕ್ರಾಂತಿ ಮತ್ತು ಸುಧಾರಣೆಗಳು 900 ವರ್ಷಗಳಾದರೂ ನಾಡಿನಲ್ಲಿ ಶಾಶ್ವತವಾಗಿವೆ ಎಂದು ತಿಳಿಸಿದರು.
ಸಾಮಾನ್ಯರು, ದೊಡ್ಡವರು ಎಂಬ ಭೇದ ಭಾವವಿಲ್ಲದೆ ಎಲ್ಲರೊಡನೆ ನಿಂತು ಧಾರ್ಮಿಕ ಜಾಗೃತಿ ಮೂಡಿಸಿದ ಗುರು ಮಲ್ಲೇಶ್ವರರು ಆಧ್ಯಾತ್ಮಿಕ ಸಂಚಲನವನ್ನೇ ಸೃಷ್ಟಿಸಿದವರು. ಅವರ ಹೆಸರಿನಲ್ಲಿರುವ ನಿಲಸೋಗೆ ಮಠದ ಧಾರ್ಮಿಕ ಪರಂಪರೆಯನ್ನು ನಾಲ್ಕನೇ ಶ್ರೀಗಳಾದ ಮಲ್ಲಪ್ಪ ಸ್ವಾಮೀಜಿ ಬಹಳ ಎತ್ತರಕ್ಕೆ ಕೊಂಡೊಯ್ದರು. ಈಗಿನ ಶ್ರೀಗಳು ಹಲವು ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಿಸಿ, ಗ್ರಾಮೀಣ ಪ್ರದೇಶದಲ್ಲಿ ಧಾರ್ಮಿಕ ಕಾರ್ಯಗಳಿಗೆ ಸಭಾ ಭವನವನ್ನು ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಾಟಾಳು ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ದೇವನೂರು ಮಠದ ಶ್ರೀ ಮಹಾಂತ ಸ್ವಾಮೀಜಿ, ಮುಡುಕನಪುರ ಹಲವಾರ ಮಠದ ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಕುದೇರು ಮಠದ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎಸ್.ಎಂ.ಪ್ರಕಾಶ್, ನರಗ್ಯಾತನಹಳ್ಳಿ ವಿರಕ್ತಮಠದ ಶ್ರೀ ಇಮ್ಮಡಿ ಶಿವಕುಮಾರ ಸ್ವಾಮೀಜಿ, ಚಿದರವಳ್ಳಿ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ನಿಲಸೋಗೆ ಶ್ರೀ ಗುರುಮಲ್ಲೇಶ್ವರ ಭಿಕ್ಷದ ದಾಸೋಹ ಮಠದ ಶ್ರೀ ಮಲ್ಲಪ್ಪ ಸ್ವಾಮೀಜಿ, ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಶೇಖರಪ್ಪ, ಚೌಹಳ್ಳಿ ಮಹದೇವಪ್ಪ, ಸಿ.ಬಿ. ಹುಂಡಿ ಪ್ರಕಾಶ್, ಚಿನ್ನಸ್ವಾಮಿ, ಸಿಆರ್‌ಸಿ ಮಹದೇವಪ್ಪ, ಗೌಡ್ರು ಶ್ರೀಕಂಠಪ್ಪ, ಮಹದೇವ ಪ್ರಸಾದ್, ಗುರು ಮಲ್ಲೇಶ್ವರ ಯುವಕರ ಸಂಘದ ಸದಸ್ಯರು ಇದ್ದರು.