

ಮಂಡ್ಯ: ಕಾಲೇಜು ವಿದ್ಯಾರ್ಥಿ ಸಂಘದ ಜತೆಗೆ ಪಠ್ಯೇತರ ಚಟುವಟಿಕೆಗಳಿಂದ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ಇಲ್ಲಿನ ಅರ್ಕೇಶ್ವರನಗರದ ಬಡಾವಣೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಸಂಘವಿದ್ದರೆ ಸಮಸ್ಯೆಗಳನ್ನು ಕಾಲೇಜು ಆಡಳಿತ ಮಂಡಳಿ ಅಥವಾ ಪ್ರಾಂಶುಪಾಲರಿಗೆ ತಿಳಿಸಿ ಪರಿಹಾರ ಕಂಡುಕೊಳ್ಳಬಹುದು. ನಾಯಕತ್ವ ಗುಣ ಬೆಳೆಸಿಕೊಳ್ಳಲು, ಸಾಂಸ್ಕೃತಿಕ, ಕ್ರೀಡಾ ಚಟುವಟಿಕಗಳನ್ನು ಪ್ರಾಂಶುಪಾಲ ಮಾರ್ಗದರ್ಶನದಲ್ಲಿ ಆಯೋಜಿಸಿಕೊಳ್ಳಬಹುದು ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಪ್ರಸ್ತುತ ತಂತ್ರಜ್ಞಾನ ಮತ್ತು ಅವಿಷ್ಕಾರಗಳು ಹೆಚ್ಚಾಗಿ ನಡೆಯುತ್ತಿದೆ. ಈಗಾಗಲೇ ಕೃತಕ ಬುದ್ದಿಮತ್ತೆಯ ರೋಬೋಟಿಕ್ ತಂತ್ರಜ್ಞಾನ ಬಳಕೆಯಿಂದ ಸಾಕಷ್ಟು ಪ್ರಯೋಜನ ಮತ್ತು ಪ್ರಯೋಗಗಳನ್ನು ಮಾಡಲಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಣ, ಸಾಸ್ಕೃತಿಕ ಚಟುವಟಿಕೆಗಳಿಂದ ಬೌದ್ದಿಕ ವಿಕಾಸ ಹೆಚ್ಚಾಗುತ್ತದೆ. ಶಿಕ್ಷಣವು ದೈಹಿಕ ಮತ್ತು ಬೌದ್ಧಿಕ ಶಕ್ತಿಗಳನ್ನು ಹೆಚ್ಚಿಸುತ್ತವೆ. ಮಾತ್ರವಲ್ಲದೆ ಅಂತರಂಗದ ಸಂಸ್ಕಾರವನ್ನು ವಿಸ್ತಾರ ಮಾಡುತ್ತದೆ ಎಂದು ತಿಳಿಸಿದರು.
ಸಾಹಿತಿ ಶುಭಶ್ರೀ, ಪ್ರಾಂಶುಪಾಲ ಹನುಮಂತಯ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಕೆ.ಪಿ.ಮೃತ್ಯುಂಜಯ, ಉಪಪ್ರಾಂಶುಪಾಲ ಎಂ,ಜೆ.ಲೋಕೇಶ್, ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ, ಉಪಾಧ್ಯಕ್ಷ ಎಂ.ಕಾಂತರಾಜ ಅರಸ್, ವಿದ್ಯಾರ್ಥಿ ಸಂಘದ ನಿಸರ್ಗ, ಅಮೂಲ್ಯ ಇತರರಿದ್ದರು. ಇದೇ ಸಂಧರ್ಭದಲ್ಲಿ ವಿದ್ಯಾರ್ಥಿನಿಯರು ಸಾಂಸ್ಕೃತಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.