

ಸಿದ್ದಾಪುರ: ನೆಲ್ಯಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಗುರುವಾರ 2024-25ನೇ ಸಾಲಿನ ವಿದ್ಯಾರ್ಥಿ ಸಂಘ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸಮಯ ವ್ಯರ್ಥ ಮಾಡದೆ ಓದಿನೆಡೆಗೆ ಗಮನ ಹರಿಸಿದರೆ ಅದು ಉತ್ತಮ ಫಲ ದೊರೆಯುತ್ತದೆ. ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪಿ.ಕೆ.ಮುಸ್ತಫಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಕ್ಕೆ ಸಹಕಾರಿಯಾಗುವಂತಹ ಶಿಕ್ಷಣವು, ವಿದ್ಯಾರ್ಥಿಗಳಿಗೆ ಸಿಗಬೇಕಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಘವು ಹೆಜ್ಜೆ ಹಾಕಬೇಕು ಎಂದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ಉಪನ್ಯಾಸಕರಾದ ಧನಂಜಯ್ ಕುಮಾರ್, ಲೋಕೇಶ್, ತುಳಸಿ, ಮಣಿಕಂಠ, ರೂಪಶ್ರೀ, ಇಸ್ಮಾಯಿಲ್, ರಿಯಾಜ್, ಸೋನಾ, ಪ್ರಿಯಾ, ರಾಧಿಕಾ, ಬಬಿತಾ, ಅಂಟೋನಿ ವಿವಿಯನ್ ಅಲ್ವಾರಿಸ್ ಇದ್ದರು.