

ತಿ.ನರಸೀಪುರ: ತಾಲೂಕಿನ ಬನ್ನಹಳ್ಳಿಹುಂಡಿ ಗ್ರಾಮದಲ್ಲಿ ಫೆ.10ರಂದು ಶ್ರೀ ಮಹದೇಶ್ವರಸ್ವಾಮಿ ನೂತನ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ಅಷ್ಟಬಂಧ ಪ್ರತಿಷ್ಠಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ. ಬಳಿಕ ಪ್ರಧಾನ ಹೋಮ, ಕಲಾ ಹೋಮ, ಜಲಾದಿ ಹೋಮ ಮತ್ತು ಶ್ರೀ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರ ಹಮ್ಮಿಕೊಳ್ಳಲಾಗಿದೆ. ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುವ ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ದೇವನೂರು ಮಠದ ಶ್ರೀಮಹಾಂತ ಸ್ವಾಮೀಜಿ ವಹಿಸಲಿದ್ದಾರೆ. ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಮಲ್ಲನಮೂಲೆ ಮಠದ ಶ್ರೀಚನ್ನಬಸವ ಸ್ವಾಮೀಜಿ ಬಸವ ಪ್ರತಿಮೆಯನ್ನು ಉದ್ಘಾಟಿಸುವರು. ಸಾಲೂರು ಮಠದ ಶ್ರೀಶಾಂತಮುಲ್ಲಿಕಾರ್ಜುನ ಸ್ವಾಮೀಜಿ ಮಹದೇಶ್ವರ ಉತ್ಸವಕ್ಕೆ ಚಾಲನೆ ನೀಡಲಿದ್ದು, ಮಾಡ್ರಳ್ಳಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಧಾರ್ಮಿಕ ಸಭೆ ಉದ್ಘಾಟಿಸುವರು. ಹಲವಾರು ಮಠದ ಶ್ರೀಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಹಾಗೂ ಬಿ.ಜಿ.ಪುರ ಮಠದ ಬಿ.ಎಸ್.ಜ್ಞಾನಾನಂದ ಚನ್ನರಾಜ ಅರಸ್ ಸ್ವಾಮೀಜಿ ಹಾಜರಿರುವರು.
ಹೊಸೂರುಹುಂಡಿ ಮಠದ ಶ್ರೀರಾಜಶೇಖರ ಸ್ವಾಮೀಜಿ ನೇತೃತ್ವದಲ್ಲಿ ವಾಟಾಳು ದಯಾನಂದ ಮತ್ತು ನಾಗೇಶ್ ಸ್ವಾಮೀಜಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದು, ಮಧ್ಯಾಹ್ನ 12 ಗಂಟೆಗೆ ದಾಸೋಹ, ರಾತ್ರಿ 9 ಬದಲಾವಣೆ ಶಿವಕುಮಾರ ಶಾಸ್ತ್ರಿ ಮತ್ತು ತಂಡದವರಿಂದ ಹರಿಕಥೆ, ಗೀತ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.