

ಮಡಿಕೇರಿ:
ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸುದ್ದಿ ಮಾಧ್ಯಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಪ್ರಭಾರ ಜಿಲ್ಲಾಧಿಕಾರಿ ವರ್ಣೀತ್ ನೇಗಿ ಹೇಳಿದರು. ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಮಹೋತ್ಸವ ಸಮಾರಂಭದಲ್ಲಿ ಕ್ಲಬ್ ಸದಸ್ಯರು ಮತ್ತು ಕುಟುಂಬಸ್ಥರಿಗೆ ಶನಿವಾರ ಏರ್ಪಡಿಸಿದ್ದ ಮನರಂಜನಾ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಸಂದರ್ಭ ಪತ್ರಿಕೆ, ಮಾಧ್ಯಮಗಳು ಮಹತ್ವದ ಕೊಡುಗೆ ನೀಡುತ್ತವೆ. ಜನಸಾಮಾನ್ಯರ ಸಮಸ್ಯೆಗಳನ್ನು ಪತ್ರಿಕೆಗಳು ಸಮಾಜಕ್ಕೆ, ಅಧಿಕಾರಿಗಳಿಗೆ ತಿಳಿಸುತ್ತವೆ. ಸ್ಥಳೀಯ ವಿಷಯಗಳು ಕೂಡ ಪತ್ರಿಕೆ, ಮಾಧ್ಯಮಗಳ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತದೆ. ಬಡವರು, ಅಶಕ್ತರ ಪರವಾಗಿ ಪತ್ರಿಕೆಗಳು ಕೆಲಸ ಮಾಡುತ್ತದೆ. ಪತ್ರಿಕಾ ರಂಗದ ಮೇಲೆ ಈಗಲೂ ಜನರು ನಂಬಿಕೆ ಇರಿಸಿಕೊಂಡಿದ್ದಾರೆ
ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಯಾವುದೇ ಉನ್ನತ ಹುದ್ದೆ ಅಲಂಕರಿಸಲು ಸುದ್ದಿಮಾಧ್ಯಮಗಳ ಪಾತ್ರ ಪ್ರಮುಖವಾಗಿರುತ್ತದೆ. ಸ್ವಸ್ತ ಸಮಾಜ ನಿರ್ಮಾಣಕ್ಕೆ ಮಾಧ್ಯಮಗಳ ಕೊಡುಗೆ ದೊಡ್ಡದಿದೆ. ಜನ ಧ್ವನಿಯಾಗಿ ಮಾಧ್ಯಮಗಳು ಕೆಲಸ ಮಾಡುತ್ತದೆ ಎಂದರು. ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಹೇಳಲಾಗುತ್ತದೆ. ಈ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸುವ ಕೆಲಸ ಮಾಡುತ್ತದೆ. ಒಂದು ಸರ್ಕಾರವನ್ನೇ ಅಲುಗಾಡಿಸುವ ಮಾಧ್ಯಮಗಳು ಹೊಮದಿವೆ ಎಂದು ಹೇಳಿದರು.
ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷೆ ಬಿ.ಆರ್. ಸವಿತಾ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಎಂ ಪೂವಯ್ಯ, ಮಹಾ ಪೋಷಕ ಜಿ. ರಾಜೇಂದ್ರ, ವಿನುಕುಶಾಲಪ್ಪ, ವಿಶ್ವ ಕುಂಬೂರು, ನವೀನ್ ಡಿಸೋಜಾ, ರೆಜಿತ್ ಕುಮಾರ್ ಗುಹ್ಯ ಇದ್ದರು.