

ಮಡಿಕೇರಿ: ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯಿಂದ ಮೂರ್ನಾಡುವಿನಲ್ಲಿ ೪೦ ಸಾವಿರ ರೂ ವೆಚ್ಚದಲ್ಲಿ ನಿರ್ಮಿಸಿರುವ ಸೋಲಾರ್ ವಿದ್ಯುತ್ ದೀಪಗಳನ್ನು ರೋಟರಿ ಜಿಲ್ಲಾ ಗವರ್ನರ್ ವಿಕ್ರಂದತ್ತ ಉದ್ಘಾಟಿಸಿದರು.
ಮಡಿಕೇರಿ-ಪಾರಾಣೆ-ನಾಪೋಕ್ಲು ಕಡೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸೇರುವ ವೃತ್ತದಲ್ಲಿ ಈ ಸೋಲಾರ್ ದೀಪವನ್ನು ಸ್ಥಾಪಿಸಲಾಗಿದೆ. ದೀಪವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ವಿಕ್ರಂದತ್ತ, ಸಹಸ್ರಾರು ಪಾದಾಚಾರಿಗಳಿಗೆ, ವಾಹನ ಚಾಲಕರಿಗೆ ಅನುಕೂಲವಾಗಲಿದೆ. ರೋಟರಿಯಿಂದ ಮುಂದೆಯೂ ಇಂತಹ ದೀರ್ಘಕಾಲ ಬಾಳುವ ಯೋಜನೆಗಳತ್ತ ಗಮನ ಹರಿಸುವಂತಾಗಲಿ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್.ಕುಶನ್ ಮತ್ತು ರೋಟರಿ ಸದಸ್ಯ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾರ್ಯದರ್ಶಿ ಕಿರಣ್ ಕುಂದರ್, ಅಸಿಸ್ಟೆಂಟ್ ಗವರ್ನರ್, ದೇವಣಿರ ಕಿರಣ್, ರೋಟರಿ ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗ, ಮಾಜಿ ಅಸಿಸ್ಟೆಂಟ್ ಗವರ್ನರ್ ದೇವಣಿರ ತಿಲಕ್ ಹಾಗೂ ರೋಟರಿ ವುಡ್ಸ್ ಸದಸ್ಯರು ಹಾಜರಿದ್ದರು.