

ಬೆಟ್ಟದಪುರ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸ್ಥಳೀಯ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರ ಅತ್ಯಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿಪ್ರಸನ್ನ ಅಭಿಪ್ರಾಯಪಟ್ಟರು.
ಬೆಟ್ಟದಪುರ ಸಮೀಪದ ಹಾರನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಸಮಾಲೋಚನೆ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಸ್ಪರ್ಶ ನೀಡುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿದೆ. ಜತೆಗೆ ಶಾಲೆಯೂ ಅಭಿವೃದ್ಧಿಯಾಗಲಿದೆ. ಶಾಲೆಗಳಿಗೆ ಹಿರಿಯ ವಿದ್ಯಾರ್ಥಿಗಳು ಕೊಡುಗೆಯಾಗಿ ಸಹಕಾರ ಮಾಡುವ ಕಾರ್ಯಕ್ಕೆ ಶಿಕ್ಷಣ ಇಲಾಖೆ ಸದಾಕಾಲ ಆಭಾರಿಯಾಗಿದೆ ಎಂದರು.
ಮುಖ್ಯಶಿಕ್ಷಕ ಕೆ.ಸಿ.ಸತೀಶ್ ಮಾತನಾಡಿ, ನಮ್ಮ ಶಾಲೆಯಲ್ಲಿ ಓದಿದಂತಹ ಹಲವಾರು ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ತಲುಪುವ ಮೂಲಕ ಇಂದಿಗೂ ಶಾಲೆಯನ್ನು ನೆನಪಿನಲ್ಲಿಟ್ಟುಕೊಂಡು ಸಹಕಾರ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಯಾರೇ ವಿದ್ಯಾರ್ಥಿಯಾದರೂ ತಾವು ಓದಿದ ಶಾಲೆಗೆ ಗೌರವ ನೀಡಬೇಕು. ಇದರಿಂದ ತಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ ಎಂದರು.
ಹಾರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರೇಗೌಡ, ಎಸ್‌ಡಿಎಂಸಿ ಅಧ್ಯಕ್ಷೆ ಕಾವ್ಯಾ ಜನಾರ್ದನ್, ಉಪಾಧ್ಯಕ್ಷ ಮಹೇಶ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶಿವರಾಜ್ ಬಿ.ಜಿ., ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜ್ ಪಿ.ವಿ., ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಿಕಾರ್ಜುನ್, ಹನುಮಂತು, ಕೀರ್ತಿರಾಜ್, ಚಂದ್ರು, ಮುಖಂಡರಾದ ಗೋವಿಂದೇಗೌಡ, ನಾರಾಯಣ್, ಅನಿತಾ, ಮಧು, ನೂರಲ್ಲಾ ಖಾನ್ ಇದ್ದರು.