

ಚಿಕ್ಕಮಗಳೂರು: ಸಖರಾಯಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ನೂತನ ಕಟ್ಟಡ ಶಿವದರ್ಶನ ಭವನ ಆ.೨೫ ರಂದು ಭಾನುವಾರ ಲೋಕಾರ್ಪಣೆಗೊಳ್ಳಲಿದೆ ಎಂದು ಬ್ರಹ್ಮಾಕುಮಾರೀಸ್‌ನ ಸಂಚಾಲಕಿ ಭಾಗ್ಯಕ್ಕ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವದರ್ಶನ ಭವನದ ನೂತನ ಕಟ್ಟಡವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ಬ್ರಹ್ಮಾಕುಮಾರೀಸ್‌ನ ಉಪ ವಲಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಡಾ. ಅಂಬಿಕಾಜಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎಚ್.ಡಿ ತಮ್ಮಯ್ಯ ನೆರವೇರಿಸಲಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಮಂಜುಳ ಹುಲ್ಲಹಳ್ಳಿ, ಡಾ. ಸಂತೋಷ್ ನೇತಾ, ನಂದಕುಮಾರ್, ಡಿ.ವಿ ಜಯಪ್ಪ, ರಾಜಮ್ಮ, ಕಿರಣ್ ಕುಮಾರ್, ಮಹಡಿಮನೆ ಸತೀಶ್, ಲತಾ ಪುಟ್ಟಸ್ವಾಮಿ, ಎಸ್.ಎನ್ ಮಂಜುನಾಥ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಬೆಳಿಗ್ಗೆ ೯.೩೦ ಕ್ಕೆ ಸಖರಾಯಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭಗಳೊAದಿಗೆ ಶಾಂತಿಯಾತ್ರೆ ನಡೆಯಲಿದ್ದು, ಈಶ್ವರೀಯ ವಿದ್ಯಾರ್ಥಿಗಳಿಂದ ಹಾಗೂ ಇತರರ ಸಹಕಾರದಿಂದ ಶಿವದರ್ಶನ ಭವನದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಸುಮಾರು ೮೦ ಲಕ್ಷ ರೂ ವೆಚ್ಚದಲ್ಲಿ ೩೦-೬೦ ಅಳತೆಯ ನಿವೇಶನದಲ್ಲಿ ನಿರ್ಮಿಸಲಾಗಿರುವ ಭವನದಲ್ಲಿ ಕೆಳ ಹಂತಸ್ತಿನಲ್ಲಿ ೨ ಧ್ಯಾನದ ಕೊಠಡಿ, ಕ್ಲಾಸ್ ಹಾಲ್, ೭ ದಿನದ ಕೋರ್ಸ್ ರೂಂ, ಅಡುಗೆ ಮನೆ, ಅತಿಥಿ ಕೊಠಡಿಗಳನ್ನು ಒಳಗೊಂಡಿದೆ ಎಂದು ಹೇಳಿದರು.
೨೦೧೦ ರ ಏಪ್ರಿಲ್‌ನಲ್ಲಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ನೂತನ ಕಟ್ಟಡ ನಿರ್ಮಿಸಲು ಹುಲಿಕೆರೆ ಮಹಾ ಸ್ವಾಮಿಗಳು ಹಾಗೂ ಎಸ್.ಎಲ್ ಧರ್ಮೇಗೌಡ, ರಾಜಯೋಗಿನಿ ಬಿ.ಕೆ ಭಾರತಿಜೀ ಇನ್ನೂ ಅನೇಕ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ್ದರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜಯೋಗಿನಿ ಬಿ.ಕೆ ಯಶೋಧಕ್ಕ, ರಾಯಪ್ಪಣ್ಣ ಉಪಸ್ಥಿತರಿದ್ದರು.