ಹೇಮರಡ್ಡಿ ಮಲ್ಲಮ್ಮನ ಜೀವನಮೌಲ್ಯ ಮನುಕುಲಕ್ಕೆ ಕೊಡುಗೆ

27BK1
ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ ಹಾಗೂ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವವನ್ನು ಪೂಜ್ಯ ಸತ್ಯಕ್ಕತಾಯಿ ಉದ್ಘಾಟಿಸಿದರು. ಪ್ರೊ.ಮೀನಾಕ್ಷಿ ಬಿರಾದಾರ, ಶಿವರಾಜ ಶಾಶೆಟ್ಟೆ, ವೀರಶೆಟ್ಟಿ ಮಲಶೆಟ್ಟಿ, ಶಿವಕುಮಾರ ಬಿರಾದಾರ, ಸೂರ್ಯಕಾಂತ ಬಿರಾದಾರ ಇತರರಿದ್ದರು.
Published on

ಬಸವಕಲ್ಯಾಣ: ಮಹಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜೀವನ ಮೌಲ್ಯಗಳು ಮನುಕುಲಕ್ಕೆ ಅದರಲ್ಲೂ ಸ್ತ್ರೀ ಕುಲಕ್ಕೆ ಅಮೂಲ್ಯ ಕೊಡುಗೆಗಳಾಗಿವೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಮೀನಾಕ್ಷಿ ಬಿರಾದಾರ ಹೇಳಿದರು.

ನಗರದ ಹರಳಯ್ಯನವರ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಆಶ್ರಯದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ ಹಾಗೂ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅನುಭಾವ ಅನುಭಾವ ನೀಡಿದ ಅವರು, ಹೇಮರಡ್ಡಿ ಮಲ್ಲಮ್ಮನವರು ಶಿವತತ್ವವನ್ನೇ ತನ್ನ ಜೀವನದ ಉಸಿರಾಗಿಸಿಕೊಂಡು ಶಿವಭಕ್ತೆಯಾಗಿ ಜಂಗಮತ್ವವನ್ನೇ ತನ್ನ ಜೀವನದ ಆಧಾರವಾಗಿಟ್ಟುಕೊಂಡು ಎಷ್ಟೇ ಕಷ್ಟ ಬಂದರೂ ಅವುಗಳನ್ನು ಸಹನೆಯಿಂದ ಎದುರಿಸಿ ತಾನು ಸಾರಿದ ಮೌಲ್ಯಕ್ಕೆ ಬದ್ಧರಾಗಿ ನಡೆದುಕೊಂಡು ಎಲ್ಲ ಮಹಿಳೆಯರಿಗೂ ಆದರ್ಶ. ಸಂಸಾರದ ನೋವು ನಲಿವುಗಳನ್ನು ಅನುಭವಿಸಿದ ಮಲ್ಲಮ್ಮ ಇತರರಿಗಿಂತಲೂ ಭಿನ್ನವಾಗಿರಲೂ ಅವರೊಳಗಿನ ಆಧ್ಯಾತ್ಮಿಕ ಶಕ್ತಿಯೇ ಮೂಲ ಕಾರಣ. ಭಕ್ತಿ ಮತ್ತು ಸದ್ಗುಣದಿಂದ ಜನರಲ್ಲಿ ಬದಲಾವಣೆ ತಂದರು ಎಂದರು.

ನೇತೃತ್ವ ವಹಿಸಿದ್ದ ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ಮಾತನಾಡಿ, ೧೨ನೇ ಶತಮಾನದ ನಂತರ ಶಾಂತಿ ಸಹಬಾಳ್ವೆಯ ಸಂದೇಶ ನೀಡಿದ ಸ್ತ್ರೀ ಕುಲತಿಲಕ ಹೇಮ್ಮರಡ್ಡಿ ಮಲ್ಲಮ್ಮನವರು. ಬಸವಗುರು ಕೊಟ್ಟ ಇಷ್ಟಲಿಂಗ ಧರಿಸಿ ಶಿವಯೋಗಿನಿ ಸಾಧಕಿಯಾಗಿದ್ದರು. ಕಲ್ಯಾಣದ ಶರಣರನ್ನು ಆದರ್ಶವಾಗಿಟ್ಟುಕೊಂಡು ವಚನ ಕ್ರಾಂತಿಯ ಭಕ್ತಿ ಪರಂಪರೆಯನ್ನು ಮುಂದುವರೆಸಿಕೊಂಡು ಬಂದ ಕೀರ್ತಿ ಹೇಮ್ಮರಡ್ಡಿ ಮಲ್ಲಮ್ಮನವರಿಗೆ ಸಲುತ್ತದೆ ಎಂದರು.

ಪತ್ರಕರ್ತ ವೀರಶೆಟ್ಟಿ ಮಲಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಬಿಡಿವಿಸಿ ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಾಂತ ಬಿರಾದಾರ, ಪ್ರೇಮಲಾ ಬಿರಾದಾರ, ಮಾತೇ ಕಲ್ಯಾಣಮ್ಮ ಉಪಸ್ಥಿತರಿದ್ದರು.

ಆಕಾಶವಾಣಿ ಕಲಾವಿದರಾದ ಸೂರ್ಯಕಾಂತ ಬಿರಾದಾರ, ದಿಲೀಪ ದೇಸಾಯಿ, ಶರಣಪ್ಪ ಜಮಾದಾರ, ರಂಜನಾ ಭೂಶೆಟ್ಟಿ ಹಾಗೂ ಮಂಜುನಾಥ ಅವರಿಂದ ಮೂಡಿ ಬಂದ ವಚನ ಸಂಗೀತ ಜನರನ್ನು ಮಂತ್ರಮುಗ್ದಗೊಳಿಸಿತು. ತೊಗಲೂರಿನ ಹೇಮರಡ್ಡಿ ಮಲ್ಲಮ್ಮ ಭಜನಾ ಸಂಘದವರು ಮಲ್ಲಮ್ಮನ ಕುರಿತು ಗೀತೆಗಳನ್ನು ಹಾಡಿದರು. ಅರಿವಿನ ಮನೆ ಅಕ್ಕನ ಬಳಗದವರು ಗುರುಪೂಜೆ ನಡೆಸಿಕೊಟ್ಟರು. ಶಿಕ್ಷಕ ಶಿವಕುಮಾರ ಬಿರಾದಾರ ಸ್ವಾಗತಿಸಿದರು. ಜಯಶ್ರೀ ಬಿರಾದಾರ ನಿರೂಪಣೆ ಮಾಡಿದರು.

ನುಡಿ ನಮನ: ಕಾರ್ಯಕ್ರಮದ ಮೊದಲು ಪೂಜ್ಯ ಡಾ.ಅಕ್ಕ ಅನ್ನಪೂರ್ಣತಾಯಿ ಅವರು ಲಿಂಗೈಕ್ಯರಾದ ನಿಮಿತ್ತ ಮೌನಚರಣೆ ಆಚರಿಸಿ ನುಡಿ ನಮನ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net