

ಬಸವಕಲ್ಯಾಣ: ಸಂಸ್ಕಾರದಿಂದ ಸದ್ಗುಣಗಳು ಬೆಳೆಯುತ್ತವೆ. ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಜತೆ ಸಂಸ್ಕಾರ ಅಳವಡಿಸಿಕೊಳ್ಳಬೇಕು. ಸಂಸ್ಕಾರ ನಮ್ಮನ್ನು ಉತ್ತಮ ಮನುಷ್ಯನ್ನಾಗಿ ರೂಪಿಸುತ್ತದೆ. ಅಂತಹ ಸಂಸ್ಕಾರ ಬೆಳೆಸಲು ಶರಣ ಸಂಸ್ಕೃತಿ ಪೂರಕವಾಗಿದೆ ಎಂದು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಮತ್ತು ಬಸವಕಲ್ಯಾಣ ಕ್ಷೇತ್ರ ಸಮಿತಿ ಸಹಯೋಗದಡಿ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಶರಣ ಸಂಸ್ಕೃತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಈ ಶಿಬಿರದಲ್ಲಿ ನಿಮ್ಮಲ್ಲಿ ಸದ್ಗುಣ ಬೆಳೆಸುವಂಥ ಸಂಸ್ಕಾರ ಹೇಳಿಕೊಡಲಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವಕಲ್ಯಾಣ ಕ್ಷೇತ್ರ ಸಮಿತಿ ಸಂಯೋಜಕ ಡಾ.ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಶಿಕ್ಷಣದ ಜತೆಗೆ ವ್ಯಕ್ತಿತ್ವ ವಿಕಸನ ಅವಶ್ಯಕವಾಗಿದೆ. ಶರಣ ಸಂಸ್ಕೃತಿಯನ್ನು ತಿಳಿಸಿಕೊಡುವ ಮೂಲಕ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವುದೇ ಶಿಬಿರದ ಮೂಲ ಆಶಯವಾಗಿದೆ ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ಸಹಾಯಕ ಆಯುಕ್ತ ಅನೀಲಕುಮಾರ ಎಚ್.ಡವಳಗಿ ಮಾತನಾಡಿ, ಮಕ್ಕಳಲ್ಲಿ ಶರಣ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಶಿಬಿರಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪೂಜ್ಯ ಡಾ.ಅಕ್ಕ ಗಂಗಾಂಬಿಕಾ ಪ್ರಾಸ್ತಾವಿಕ ಮಾತನಾಡಿದರು. ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು, ಅನುಭವ ಮಂಟಪದ ಶ್ರೀ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಶ್ರೀ ಬಸವರಾಜ ದೇವರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶ್ರೀ ಪ್ರಕಾಶ ದೇವರು ಮತ್ತು ಲೋಕೇಶ ಗುರೂಜಿ, ಅನುಭವ ಮಂಟಪ ಟ್ರಸ್ಟ್ ಉಪಾಧ್ಯಕ್ಷ ವೈಜಿನಾಥ ಕಾಮಶೆಟ್ಟೆ, ಬಿಡಿಪಿಸಿ ನಿರ್ದೇಶಕ ಕಾಶಪ್ಪ ಸಕ್ಕರಭಾವಿ, ವೀರೇಶ ಕುಂಬಾರ ಇತರರಿದ್ದರು.
ಶಿವರಾಜ ಹಡಪದ ಸ್ವಾಗತಿಸಿದರು. ಶರಣ ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು. ಜಗನ್ನಾಥ ಪತಂಗೆ ವಂದಿಸಿದರು. ಸ್ಮೀತಾ ಘೂಳೆ ಮತ್ತು ಗಗನಶ್ರೀ ಘೂಳೆ ವಚನ ನೃತ್ಯ ಗಮನ ಸೆಳೆಯಿತು.
ಒಬ್ಬ ಶಿಲ್ಪಿ ಕಲ್ಲು ಬಂಡೆಯಿಂದ ಅನವಶ್ಯಕವಾದ ಭಾಗ ತೆಗೆದಾಗ ಒಂದು ಮೂರ್ತಿ ರೂಪ ತಾಳುತ್ತದೆ. ಅದೇ ರೀತಿ ನಮ್ಮಲ್ಲಿರುವ ದುರ್ಗುಣಗಳನ್ನು ಕಳೆದಾಗ ಸದ್ಗುಣ ಸಂಪನ್ನರಾಗುತ್ತೇವೆ. ಹೀಗಾಗಿ ಸದ್ಗುಣಗಳನ್ನು ಬೆಳೆಸಲು ಮಕ್ಕಳಿಗೆ ಉತ್ತಮ ಸಂಸ್ಕಾರ ಹೇಳಿಕೊಡುವ ಕೆಲಸ ಪ್ರತಿ ಮನೆಯಲ್ಲೂ ನಡೆಯಬೇಕು.
| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್