

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಕರ್ನಾಟಕದ ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿಯಾಗಿದೆ. ಯೋಜನೆಯನ್ನು ಮೂದಲಿಸಿದವರೇ ಇಂದು ಅದನ್ನು ಕಾಪಿ ಮಾಡುತ್ತಿದ್ದಾರೆ ಎಂದು ಪಂಚ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೇಳಿದರು.
ಬಂಟ್ಮಾಳ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳ ಸ್ವಸಹಾಯ ಸಂಘಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ ಗೃಹಲಕ್ಷ್ಮೀ ಫಲಾನುಭವಿಗಳ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಮಾಜಿ ಸಚಿವ ಬಿ.ರಮಾನಾಥ ರೈ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಜಿಲ್ಲಾ ಉಪಾಧ್ಯಕ್ಷ ನಾರಾಯಣ ನಾಯ್ಕ, ಪುರಸಭಾಧ್ಯಕ್ಷ ವಾಸು ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಗೃಹಲಕ್ಷ್ಮೀ ಜಿಲ್ಲಾ ನೋಡಲ್ ಅಧಿಕಾರಿ ಉಸ್ಮಾನ್, ಕಡಬ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ ಮೊದಲಾದವರಿದ್ದರು.
ಅತಿ ಹೆಚ್ಚು ಸಂಘ ರಚನೆ ಮಾಡಿದ ಪಂಚಾಯಿತಿಗಳನ್ನು ಹಾಗೂ ವ್ಯವಸ್ಥಾಪಕಿ ಸುಧಾ ಅವರನ್ನು ಗೌರವಿಸಲಾಯಿತು. ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್ ವಂದಿಸಿದರು. ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಂತಿ ವಿ.ಪೂಜಾರಿ ಪ್ರಸ್ತಾವನೆಗೈದರು. ಪಿಡಿಒ ಸುನೀಲ್ ನಿರೂಪಿಸಿದರು.
ತ್ರಿಬಲ್ ಆರ್. ಫೇಮಸ್!
ರಾಜ್ಯ ರಾಜಕೀಯದಲ್ಲಿ ರಮಾನಾಥ ರೈ, ಆರ್.ರಾಮಲಿಂಗ ರೆಡ್ಡಿ ಹಾಗೂ ಎಚ್.ಎಂ.ರೇವಣ್ಣ ತ್ರಿಬಲ್ ಆರ್. ಎಂದೇ ಫೇಮಸ್! ರಮಾನಾಥ ರೈ ಅಧಿಕಾರ ಇಲ್ಲದಿದ್ದರೂ ಜನ ಸೇವೆ ಮಾಡುವ ನಾಯಕ. ರಾಜ್ಯದಲ್ಲೇ ಸ್ವಂತ ಖರ್ಚಿನಿಂದ ಕಾಂಗ್ರೆಸ್‌ಗೆ ಕಚೇರಿ ನೀಡಿದವರು. ಇಂತಹ ನಾಯಕರು ನಮಗೆ ಬೇಕು. ಕಾಂಗ್ರೆಸ್ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಕಾಂಗ್ರೆಸ್‌ಗೆ ನಾವೇನು ಕೊಟ್ಟಿದ್ದೇವೆ ಎನ್ನುವವರು ಕಡಿಮೆಯಾಗುತ್ತಿದ್ದಾರೆ ಎಂದು ರೇವಣ್ಣ ಹೇಳಿದರು.
ರಾಜ್ಯದಲ್ಲೇ ದ.ಕ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಸವಲತ್ತು ಪಡೆದಿದ್ದಾರೆ. ಆದರೆ ಸವಲತ್ತು ಪಡೆದವರೆ ಯೋಜನೆಯನ್ನು ಟೀಕಿಸುತ್ತಿದ್ದಾರೆ. ಬಿಜೆಪಿಗರ ಯೋಜನೆಗಳು ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಅದು ಕಾರ್ಯರೂಪಕ್ಕೆ ಬರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಸಂದರ್ಭ ನೀಡಿದ್ದ ಎಲ್ಲ ಭರವಸೆಗಳು ಈಡೇರಿವೆ. 98,594 ಕೋಟಿ ರೂ. ಗ್ಯಾರಂಟಿ ಯೋಜನೆ ಮೂಲಕ ಸರ್ಕಾರ ಜನರ ಖಾತೆಗೆ ತಲುಪಿಸಿದೆ. 560 ಕೋಟಿ ಶಕ್ತಿ ಯೋಜನೆ ಮೂಲಕ ಪ್ರಯಾಣಿಸಿರುವುದು ವಿಶ್ವದಾಖಲೆಯಾಗಿದೆ. 2 ಅಂತಾರಾಷ್ಟ್ರೀಯ ಪ್ರಶಸ್ತಿಗಳು ಶಕ್ತಿ ಯೋಜನೆಗೆ ಬಂದಿದೆ. ಎಚ್.ಎಂ.ರೇವಣ್ಣ ಪಂಚ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ