

ಹುಬ್ಬಳ್ಳಿ : ನವಲಗುಂದ ವಿಧಾನಸಭೆ ಕ್ಷೇತ್ರದ ಹೆಬಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಕೋಲ್ ಇಂಡಿಯಾ ಲಿ. 62 ಲಕ್ಷ ರೂ. ಅನುದಾನದಡಿ ನಿರ್ವಿುಸಿರುವ 4 ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶನಿವಾರ ನೆರವೇರಿಸಿದರು.
ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಕಂಚಿನ ಪುತ್ಥಳಿಯನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು.
ಎನ್ಟಿಪಿಸಿಯ ಸಿಎಸ್ಆರ್ ಕಾರ್ಯಚಟುವಟಿಕೆಯಡಿ ಹೆಬಸೂರು ಗ್ರಾಮದ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಶಾಲೆಗಳಿಗೆ 45 ಡೆಸ್ಕ್ಗಳನ್ನು ಇದೇ ವೇಳೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಲ್ಹಾದ ಜೋಶಿ, ವಿಕಸಿತ ಭಾರತದ ಕನಸು ಈಡೇರಿಸಲು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಇದಕ್ಕಾಗಿ ಉತ್ತಮ ವಾತಾವರಣ ನಿರ್ವಿುಸಬೇಕೆಂಬುದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಗುರಿಯಾಗಿದೆ ಎಂದರು.
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿಯೂ ಸರ್ಕಾರಿ ಶಾಲೆಗಳಲ್ಲಿ ಹೊಸ ಕೊಠಡಿಗಳನ್ನು ನಿರ್ವಿುಸಿ, ಮೂಲಸೌಕರ್ಯಗಳನ್ನು ಒದಗಿಸಲು ನಿರಂತರ ಶ್ರಮಿಸಿದ್ದಾಗಿ ತಿಳಿಸಿದರು.
ಶ್ರೀ ಸಿದ್ದಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಡಾ. ಆರ್.ಬಿ. ಶಿರಿಯಣ್ಣವರ ಹಾಗೂ ಇತರರು ಇದ್ದರು.