ತಾಯಿಯಂತೆ ಪೊರೆವ ಭಾಷೆ ಸಂಸ್ಕೃತ

UDP-19-1-Sanskrit
ಉಡುಪಿಯ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪುತ್ತಿಗೆ ಶ್ರೀಗಳು ಪ್ರತಿಭಾ ಪುರಸ್ಕಾರ ನೀಡಿದರು. ಸುಶ್ರೀಂದ್ರ ತೀರ್ಥ ಶ್ರೀಪಾದ, ಕೆ.ಗಣಪತಿ, ಅಶೋಕ್​ ಕಾಮತ್​, ಯಲ್ಲಮ್ಮ, ನಿರಂಜನ್​ ಚೋಳಯ್ಯ, ಪ್ರಭಾಕರ ಭಟ್​ ಇತರರಿದ್ದರು.
Published on

ಸುಗುಣೇಂದ್ರ ಶ್ರೀ ಅಭಿಮತ | ಸಂಸ್ಕೃತೋತ್ಸವ, ಪ್ರತಿಭಾ ಪುರಸ್ಕಾರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಜಗತ್ತಿನ ಯಾವ ಭಾಷೆಗೂ ಸಂಸ್ಕೃತದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ಸಂಸ್ಕೃತವನ್ನು ಹೆಚ್ಚು ಸಂಪೋಷಣೆ ಮಾಡಿದಷ್ಟು ಉಳಿದ ಭಾಷೆಗಳೂ ಸಹ ಹೆಚ್ಚು ಬೆಳೆಯುತ್ತವೆ. ಏಕೆಂದರೆ, ತಾಯಿಯಂತೆ ಪೊರೆಯುವ ಗುಣ ಸಂಸ್ಕೃತ ಭಾಷೆಯಲ್ಲಿದೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಉಡುಪಿಯ ರಾಜಾಂಗಣದಲ್ಲಿ ಪುತ್ತಿಗೆ ಮಠ, ರಾಜ್ಯ ಸಂಸ್ಕೃತ ಭಾಷಾ ಶಿಕ್ಷಕರ ಸಂಘ ಬೆಂಗಳೂರು ಆಶ್ರಯದಲ್ಲಿ ಉಡುಪಿ ಜಿಲ್ಲಾ ಸಂಸ್ಕೃತ ಶಿಕ್ಷಕರ ಸಂಘ ಆಯೋಜಿಸಿದ್ದ ಸಂಸ್ಕೃತೋತ್ಸವ ಮತ್ತು ಸಂಸ್ಕೃತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾಷೆಯ ಮೂಲ ಚೌಕಟ್ಟು

ಭಾಷಾ ಕಲಿಕೆಗೆ ಸಂಸ್ಕೃತವನ್ನೇ ಮೂಲ ಚೌಕಟ್ಟು ಮಾಡಿಕೊಂಡರೆ ಉಳಿದ ಯಾವುದೇ ಭಾಷಾ ಕಲಿಕೆಯೂ ಸಹ ಸುಲಭ ಸಾಧ್ಯ. ನಾವು 12 ವರ್ಷಗಳ ಕಾಲ ಸಂಸ್ಕೃತ ಅಭ್ಯಾಸ ಮಾಡಿದ್ದರಿಂದಲೇ ಆಂಗ್ಲ ಭಾಷೆ ಕಲಿಯಲು ಸಾಧ್ಯವಾಯಿತು. ವಿಶ್ವಸಂಸ್ಥೆಯಲ್ಲಿ, ಅಮೆರಿಕ, ರಷ್ಯಾ ಇತ್ಯಾದಿ ಹಲವು ದೇಶಗಳ ಅಧ್ಯಕ್ಷರೊಂದಿಗೆ ಉತ್ತಮವಾಗಿ ಇಂಗ್ಲಿಷ್​ ಮಾತಾನಾಡಲು ಸಾಧ್ಯವಾದದ್ದು ಸಂಸ್ಕೃತ ಭಾಷಾ ಕಲಿಕೆಯ ಚೌಕಟ್ಟು ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಪುರಸ್ಕಾರ

ಉಡುಪಿ ಜಿಲ್ಲೆಯಲ್ಲಿ ಕಳೆದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಸಂಸ್ಕೃತ ಭಾಷಾ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ 230ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಿರಿಯ ವಿದ್ವಾಂಸ, ನಿವೃತ್ತ ಪ್ರಾಂಶುಪಾಲ ಮಧುಸೂದನ ಭಟ್​ ವಿಶೇಷ ಉಪನ್ಯಾಸ ನೀಡಿದರು.

ಪುತ್ತಿಗೆ ಮಠದ ಕಿರಿಯ ಪಟ್ಟದ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಕೆ.ಗಣಪತಿ, ಡಯಟ್​ ಸಂಸ್ಥೆಯ ಉಪಪ್ರಾಂಶುಪಾಲ ಅಶೋಕ್​ ಕಾಮತ್​, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ, ಸಂಸ್ಕೃತಾಭಿಮಾನಿ ದಾನಿ ನಿರಂಜನ್​ ಚೋಳಯ್ಯ, ಪುತ್ತಿಗೆ ಮಠದ ರಮೇಶ ಭಟ್​ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಸಂಘದ ಅಧ್ಯಕ್ಷ ಪ್ರಭಾಕರ ಭಟ್​ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್​ ಹೆಗಡೆ ವಂದಿಸಿದರು. ಶಿಕ್ಷಕ ರಾಘವೇಂದ್ರ ರಾವ್​ ಕಾರ್ಯಕ್ರಮ ನಿರೂಪಿಸಿದರು.

ಅಲ್ಪರಿಗೆ ಯಾವಾಗಲೂ ಹೊಟ್ಟೆಕಿಚ್ಚು

ವಿದೇಶಿಯರೂ ಸಹ ಸಂಸ್ಕೃತದ ಬಗ್ಗೆ ಹೆಚ್ಚು ಆಸಕ್ತಿ, ಪ್ರೀತಿ ಹೊಂದಿದ್ದಾರೆ. ಲಂಡನ್​ನಲ್ಲಿ ಹಿಬ್ರು ಭಾಷೆ ರದ್ದು ಮಾಡಿದ್ದು, ಅದರ ಬದಲಿಗೆ ಸಂಸ್ಕೃತ ಕಲಿಸುತ್ತಿದ್ದಾರೆ. ಇತ್ತೀಚಿಗೆ ಸಂಸ್ಕೃತದ ಕುರಿತು ತಾವು ಮಾತನಾಡಿದ ಅಭಿಪ್ರಾಯವನ್ನು ಕೆಲವರು ವಿವಾದವನ್ನಾಗಿಸಿದ್ದರು. ಸಂಸ್ಕೃತದ ಬಗ್ಗೆ ಏನು ಮಾತನಾಡಿದರೂ ವಿವಾದ ಯಾಕೆ ಮಾಡುತ್ತಾರೆಂದರೆ ಅದು ಹೊಟ್ಟೆಕಿಚ್ಚಿಗಾಗಿ. ಉತ್ತಮವಾದದ್ದನ್ನು ಕಂಡರೆ ಅಲ್ಪರಿಗೆ ಯಾವಾಗಲೂ ಹೊಟ್ಟೆಕಿಚ್ಚು ಬರುತ್ತದೆ ಅಲ್ಲವೇ ಎಂದು ಪುತ್ತಿಗೆ ಶ್ರೀಗಳು ನಗುತ್ತ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net