ಕಸಾಪ ಸಮ್ಮೇಳನಕ್ಕೆ ಶೀಘ್ರದಲ್ಲೇ ಸ್ಥಳ ನಿಗದಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ

Inauguration of Sahitya Sammelna office Mandya
Published on

ಮಂಡ್ಯ: ಮಂಡ್ಯದಲ್ಲಿ ಡಿ.20ರಿಂದ 22ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಅದರಂತೆ ಶೀಘ್ರದಲ್ಲೇ ಸ್ಥಳ ನಿಗದಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮ್ಮೇಳನಕ್ಕೆ ಸಂಬಂಧಿಸಿದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮ್ಮೇಳನ ನಡೆಸಲು ಜಿಲ್ಲಾಡಳಿತದಿಂದ ಅಮರಾವತಿ ಹೋಟೆಲ್ ಹಿಂಭಾಗ, ಚಿಕ್ಕ ಮಂಡ್ಯ ಮತ್ತು ಬೈಪಾಸ್ ಸ್ಥಳಗಳ ಆಯ್ಕೆ ಮಾಡಿದೆ. ಈ ಪೈಕಿ ಒಂದು ಸ್ಥಳವನ್ನು ನಿಗದಿ ಮಾಡಲಾಗುವುದು ಎಂದರು

ಸಮ್ಮೇಳನವನ್ನು ಆಚರಣೆ ಮಾಡುವುದಕ್ಕೆ ಸಭೆ ನಡೆಸಿ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗಿದೆ. ಸಮ್ಮೇಳನ ಆಚರಣೆಗೆ ಬರುವುದಕ್ಕೆ ಜನರಿಗೆ ಯಾವುದೇ ತರಹ ತೊಂದರೆ ಆಗಬಾರದು. ಆದ್ದರಿಂದ ಡಿಸೆಂಬರ್ ಮಾಹೆಯಲ್ಲಿ ಮಳೆಗಾಲ ಇಲ್ಲದಿರುವಾಗ ಮತ್ತು ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬೇಕು ಎಂಬ ಉದ್ದೇಶವಿದೆ ಎಂದು ಹೇಳಿದರು.

ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಷಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ ಸುವರ್ಣ ಸಂಭ್ರಮದ ಕಾಲದಲ್ಲಿ ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿರುವುದು ಖುಷಿಯ ವಿಚಾರ. ಈ ಬಾರಿಯ ಸಮ್ಮೇಳನ ಅದ್ದೂರಿಯಾಗಿ ಆಚರಣೆಯಾಗಬೇಕು. ಈ ಸಂಬಂಧ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ವಿದೇಶದಲ್ಲಿರುವ ಕನ್ನಡಿಗರಿಗೂ ಸಮ್ಮೇಳನಕ್ಕೆ ಆಹ್ವಾನ ನೀಡಲಾಗಿದೆ. ಒಟ್ಟಾರೆ ಎಲ್ಲರೂ ಸೇರಿ ಅಚ್ಚುಕಟ್ಟಾಗಿ ಸಮ್ಮೇಳನ ಆಯೋಜಿಸೋಣ ಎಂದರು.

ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net