ರಾಜ್ಯದ ಮೊದಲ ರಸ್ತೆ ಸುರಕ್ಷತಾ ಜಾಗೃತಿ ಕೇಂದ್ರ ತುಮಕೂರಿನಲ್ಲಿ ಉದ್ಘಾಟನೆ

09Tmk_Raste_Suraksate_01 new
Published on

ತುಮಕೂರು: ರಾಜ್ಯದಲ್ಲಿಯೇ ಅತೀ ಹೆಚ್ಚು ರಸ್ತೆ ಅಪಘಾತಗಳು ಜಿಲ್ಲೆಯಲ್ಲಿ ಸಂಭವಿಸುತ್ತಿದ್ದು, ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದು ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಆಯುಕ್ತ ಎನ್.ಶಿವಕುಮಾರ್ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಹಯೋಗದಲ್ಲಿ ರಾಜ್ಯದ ಮೊದಲ ರಸ್ತೆ ಸುರಕ್ಷತಾ ಜಾಗೃತಿ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯಿಂದ ಜಾಗೃತಿ ಅಭಿಯಾನ ಆರಂಭಿಸಲಾಗುತ್ತಿದೆ. ಅಭಿಯಾನಕ್ಕೆ ಸರ್ಕಾರದ ಪ್ರಯತ್ನದ ಜತೆಗೆ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದರು.

ದೇಶದಲ್ಲಿ ರಸ್ತೆ ಅಪಘಾತಗಳಿಂದ ಹೆಚ್ಚು ಮಂದಿ ಅಕಾಲಿಕ ಮರಣ ಹೊಂದುತ್ತಿದ್ದಾರೆ. ರಸ್ತೆ ಅಪಘಾತಗಳು ಜನರಲ್ಲಿ ಭಯವನ್ನುಂಟು ಮಾಡುತ್ತಿವೆ. ರಸ್ತೆಯ ನಿಯಮಗಳನ್ನು ಉಲ್ಲಂಘಿಸುತ್ತಿರುವುದೇ ಅಪಘಾತಕ್ಕೆ ಕಾರಣ. ಇದರಲ್ಲಿ ಯುವಕರೇ ಹೆಚ್ಚಾಗಿ ಪ್ರಾಣತೆರುತ್ತಿದ್ದಾರೆ. ರಸ್ತೆಯಲ್ಲಿ ವ್ಹೀಲಿಂಗ್‌ನಂತಹ ಹುಚ್ಚು ಸಾಹಸಕ್ಕೆ ಯುವಕರು ಜೀವಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಪಾಲಕರು ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಡಬಾರದು ಎಂದು ಸಲಹೆಯಿತ್ತರು. ರಸ್ತೆ ಸುರಕ್ಷತಾ ಜಾಗೃತಿ ಕೋಶಗಳನ್ನು ತಾಲೂಕು ಾರು ಶಾಲಾ-ಕಾಲೇಜುಗಳಲ್ಲಿ ಸ್ಥಾಪಿಸಲಾಗುವುದು. ಈ ಕೋಶಗಳಿಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಭೇಟಿ ನೀಡಿ ರಸ್ತೆ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಸಮೀಕ್ಷೆ ಪ್ರಕಾರ ವಾಹನ ಚಾಲಕರ ಅಜಾಗರೂಕತೆಯಿಂದ ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹೇಳಿದರು. ರಸ್ತೆ ಅಪಘಾತ ತಡೆಗಟ್ಟಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಸಹಯೋಗದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಬ್ಲಾಕ್‌ಸ್ಪಾಟ್ಸ್‌ಗಳನ್ನು ಗುರುತಿಸಲು ಕ್ರಮವಹಿಸಲಾಗುತಿದ್ದು ವಾಹನ ಚಾಲಕರು ರಸ್ತೆ ನಿಯಮ, ಕಾನೂನು ಕಾಯ್ದೆಗಳನ್ನು ಪಾಲಿಸಬೇಕು ಎಂದರು.

ರಸ್ತೆ ಸುರಕ್ಷತಾ ಪ್ರಾಧಿಕಾರದ ಹೆಚ್ಚುವರಿ ಆಯುಕ್ತ ನರೇಂದ್ರ ಹೊಳ್ಕರ್, ಡಿಹೆಚ್‌ಒ ಡಾ.ಚಂದ್ರಿಕಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು, ಪಿಯುಡಿಡಿ ಲಲಿತಾಕುಮಾರಿ, ಪ್ರಾಚಾರ್ಯ ಡಿ.ಕೆ.ಜಯರಾಮಯ್ಯ ಮತ್ತಿತರರು ಇದ್ದರು.

ದೇಶದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ಅಪಘಾತದಿಂದ ಮರಣ ಹೊಂದುತ್ತಿದ್ದಾರೆ. ಅಲ್ಲದೇ ಶೇ.90 ವಾಹನ ಸವಾರರು ರಸ್ತೆ ನಿಯಮ ಪಾಲಿಸುತ್ತಿಲ್ಲ. ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net