ರಾಮಮಂದಿರ ಉದ್ಘಾಟನೆ, ಮಹಾಲಕ್ಷ್ಮೀ ಬಡಾವಣೆಯಲ್ಲಿ ಶತಕೋಟಿ ರಾಮ ಜಪ, ರಾಮ ತಾರಕ ಮಹಾಯಾಗ

Gopalaiah Minister
Published on

ಬೆಂಗಳೂರು

ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ವತಿಯಿಂದ ಜ.21 ಮತ್ತು 22ರಂದು ಅದ್ಧೂರಿ ತ್ರಯೋದಶ ಲಕ್ಷ ಶ್ರೀ ರಾಮತಾರಕ ಮಹಾಯಾಗ, ಸೀತಾ ಕಲ್ಯಾಣೋತ್ಸವ ಮತ್ತು 1008 ಕಲಶಾಭಿಷೇಕ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಶಾಸಕ ಕೆ. ಗೋಪಾಲಯ್ಯ ಮತ್ತು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಕಾರ್ಯಕ್ರಮಗಳು ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪವಿರುವ ರಾಣಿ ಅಬ್ಬಕ್ಕ ಮೈದಾನದಲ್ಲಿ 2 ದಿನಗಳ ಕಾಲ ಬೆಳಗ್ಗೆಯಿಂದ ರಾತ್ರಿಯವರೆಗೂ ಅದ್ಧೂರಿಯಾಗಿ ನಡೆಯಲಿದೆ ಎಂದು ತಿಳಿಸಿದರು.

ಶತಕೋಟಿ ರಾಮ ಜಪ:

ರಾಮ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಭಕ್ತರ ಸಹಕಾರದಿಂದ ಶತಕೋಟಿ ಶ್ರೀ ರಾಮನಾಮ ಜಪ ಮಾಡಲಾಗುತ್ತಿದೆ. ನವರಾತ್ರಿಯಂದೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಅಶೋಕ್ ಹಾರನಹಳ್ಳಿ ತಿಳಿಸಿದರು.

ರಾಮಾಯಣ ನೃತ್ಯ ರೂಪಕ:

ಶಾಸಕ ಕೆ. ಗೋಪಾಲಯ್ಯ ಮಾತನಾಡಿ, ಶ್ರೀರಾಮ ಸುಪ್ರಭಾತ, ಗೋಪೂಜೆ, ಯಾಗ ಶಾಲಾ ಪ್ರವೇಶ, ಗುರು ಪ್ರಾರ್ಥನೆ, ಗಂಗಾಪೂಜೆ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ, ಋತ್ವಿಕ್ ವರ್ಗ, ಕಲಶ ಸ್ಥಾಪನೆ, ರಾಮತಾರಕ ಯಾಗ ಪ್ರಾರಂಭ, ಚತುರ್ವೇದ ಪಾರಾಯಣ, ಶ್ರೀ ರಾಮಾಯಣ ಪಾರಾಯಣ ನಡೆಯಲಿದೆ.

ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ತೀರ್ಥ, ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 4ರಿಂದ 7ರ ವರೆಗೆ ಶ್ರೀ ಸೀತಾ ಕಲ್ಯಾಣೋತ್ಸವ ನಡೆಯಲಿದೆ. ರಾತ್ರಿ 7ಕ್ಕೆ ರಾಜೇಂದ್ರ ಹಾಗೂ ಅಭಿನವ ಡಾನ್ಸ್ ಕಂಪನಿ ವತಿಯಿಂದ ರಾಘವ ಲಹರಿ- ಶ್ರೀರಾಮನ ಕುರಿತು ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಲಾಗುತ್ತದೆ ಎಂದರು.

22ರಂದು ರಾಮತಾರಕ ಯಾಗ:

ಅಯೋಧ್ಯೆಯಲ್ಲಿ ಸತತ 500 ವರ್ಷಗಳ ಬಳಿಕ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಇದನ್ನು ಬೆಂಗಳೂರಿನಲ್ಲಿಯೂ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. 300 ಪುರೋಹಿತರಿಂದ ಶ್ರೀರಾಮ ತಾರಕ ಮಹಾಯಾಗ ಮತ್ತು 1008 ಕಲಶಾಭಿಷೇಕ ನಡೆಯಲಿದೆ. ಬಳಿಕ ಕಳಶದ ನೀರನ್ನು ಪ್ರಸನ್ನ ಆಂಜನೇಯನಿಗೆ ಅಭಿಷೇಕ ಮಾಡಲಾಗುತ್ತದೆ ಎಂದು ಹೇಳಿದರು.

ದೊಡ್ಡ ಪರದೆಯಲ್ಲಿ ನೇರ ಪ್ರಸಾರ:

ಅಯೋಧ್ಯೆಯಲ್ಲಿನ ರಾಮ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ದೊಡ್ಡ ಎಲ್‌ಇಡಿ ಪರದೆಯಲ್ಲಿ ಪ್ರಸಾರ ಮಾಡಲಾಗುತ್ತದೆ. ಈ ವೇಳೆ ಆದಿಚುಂಚನಗಿರಿ ಮಹಾಸಂಸ್ಥಾನ ಪೀಠದ ಡಾ. ನಿರ್ಮಲಾನಂದ ಸ್ವಾಮೀಜಿ, ರಾಜಾಜಿನಗರದ ಸಚ್ಚಿದಾನಂದ ಅದ್ವೈತ ಆಶ್ರಮದ ಅದ್ವೈಯಾನಂದ ಸರಸ್ವತಿ ಸ್ವಾಮೀಜಿ, ಆದಿಚ್ಛಿನ್ನ ಪರಂಪರಾ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ, ಬೆಲಗೂರು ವೀರಪ್ರತಾಪ ಆಂಜನೇಯ ಸ್ವಾಮಿ ದೇವಾಲಯದ ವಿಜಯಮಾರುತಿ ಶರ್ಮ ಗುರೂಜಿ ಭಾಗವಹಿಸಲಿದ್ದಾರೆ. ಡಾ. ಪಾವಗಡ ಪ್ರಕಾಶ್ ರಾವ್ ಅವರು ಪ್ರವಚನ ನೀಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಡಾ. ವಿ.ಎಸ್. ರಾಘವೇಂದ್ರ ಭಟ್, ಡಾ. ಭಾನುಪ್ರಕಾಶ್ ಶರ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net