

ಮೈಸೂರು: ಮೈಸೂರು ತಾಲೂಕಿನ ದಡದಹಳ್ಳಿ ಬಳಿ(ಅಶೋಕಪುರಂ-ಕಡಕೊಳ ರೈಲ್ವೆ ನಿಲ್ದಾಣದ ನಡುವೆ) ರೈಲ್ವೆ ಅಂಡರ್‌ಪಾಸ್ ಅನ್ನು ಸೋಮವಾರ ಉದ್ಘಾಟಿಸಲಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ ಅಮೃತ್ ಭಾರತ್ ಯೋಜನೆಯಡಿ ದೇಶಾದ್ಯಂತ ನಿರ್ಮಾಣಗೊಂಡಿರುವ ರೈಲ್ವೆ ಕಾಮಗಾರಿಗಳಲ್ಲಿ ಇದು ಒಂದು. ವರ್ಚುವಲ್ ಆಗಿ ಇದನ್ನು ಸಾರ್ವಜನಿಕರ ಸೇವೆಗೆ ಪ್ರದಾನಿ ಅರ್ಪಿಸಿದರು.
ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರು-ಚಾಮರಾಜನಗರ ಮಾರ್ಗದ ಕಡಕೊಳದ ಸಮೀಪದಲ್ಲಿ ಒಂದೂವರೆ ಕಿ.ಮೀ. ಪ್ರದೇಶದಲ್ಲಿ ವಿದ್ಯುದ್ದೀಕರಣಕ್ಕೆ ವಿಮಾನ ನಿಲ್ದಾಣದ ಪ್ರಾಧಿಕಾರದಿಂದ ಅನುಮತಿ ದೊರೆಯುತ್ತಿಲ್ಲ. ಇದಕ್ಕೆ ಪರಿಹಾರ ಕಂಡು ಹಿಡಿಯಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿದೆ. ರೈಲ್ವೆ ಹಳಿಯ ಸ್ಥಳಾಂತರಕ್ಕೆ ಚಿಂತನೆ ನಡೆದಿದೆ ಎಂದರು.
ಮೈಸೂರು -ಕುಶಾಲನಗರ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ 3097 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಲು ರೈಲ್ವೆ ಮಂಡಳಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ಈಗ ರಾಜ್ಯ ಸರ್ಕಾರ ಭೂ ಸ್ವಾಧೀನ ಮತ್ತು ನಿರ್ಮಾಣ ವೆಚ್ಚದ ಶೇ.50 ಅನುದಾನವನ್ನು ನೀಡಬೇಕು. ರಾಜ್ಯದ 30 ಜಿಲ್ಲೆಗಳಲ್ಲಿ ರೈಲ್ವೆ ಸಂಪರ್ಕ ಇಲ್ಲದ ಜಿಲ್ಲೆ ಕೊಡಗು ಮಾತ್ರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಸಹಕಾರ ಕೊಡಬೇಕು ಎಂದು ಕೋರಿದರು.
ಮಂಡಕಳ್ಳಿ ವಿಮಾಣ ನಿಲ್ದಾಣದ ರನ್‌ವೇ ವಿಸ್ತರಣೆಗೆ ಸಾವಿರ ಕೋಟಿ ರೂ. ಬೇಕಾಗುತ್ತದೆ. ಕೇಂದ್ರ ಸರ್ಕಾರ ಅನುದಾನ ಕೊಡಲು ತಯಾರಿದ್ದು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಭೂಸ್ವಾಧೀನಕ್ಕೆ 319 ಕೋಟಿ ರೂ. ಕೊಟ್ಟಿದ್ದರು. ಈಗ ಸಿದ್ದರಾಮಯ್ಯ ಅವರು 43 ಕೋಟಿ ರೂ. ಘೋಷಣೆ ಮಾಡಿದ್ದಾರೆ ಎಂದರು.
ರನ್‌ವೇ ವಿಸ್ತರಣೆಗೆ ಅಡ್ಡಿಯಾಗಿರುವ ನೀರಾವರಿ ಇಲಾಖೆಯ ನಾಲೆಗಳು ಮತ್ತು ಸೆಸ್ಕ್, ಕೆಪಿಟಿಸಿಎಲ್ ವಿದ್ಯುತ್ ತಂತಿಗಳನ್ನು ಸ್ಥಳಾಂತರ ಮಾಡಬೇಕಿದ್ದು, ಇದಕ್ಕಾಗಿ 150 ಕೋಟಿ ರೂ. ಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಶೋಕಪುರಂ ರೈಲು ನಿಲ್ದಾಣದಲ್ಲಿ 4 ಪ್ಲಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮತ್ತೊಂದು ಫ್ಲಾಟ್‌ಫಾರ್ಮ್ ಕಾರ್ಯ ಪ್ರಗತಿಯಲ್ಲಿದ್ದು, ಮಾರ್ಚ್ ಮೊದಲ ವಾರದಲ್ಲಿ ಅಶೋಕಪುರಂ ನವೀಕೃತ ನಿಲ್ದಾಣವನ್ನು ಉದ್ಘಾಟಿಸಲಾಗುತ್ತದೆ ಎಂದು ವಿವರಿಸಿದರು.
ರೈಲ್ವೆ ಹಳಿಗಳು ಹಾದು ಹೋಗುವ ಗ್ರಾಮೀಣ, ನಗರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಳಸೇತುವೆ, ಮೇಲ್ಸೇತುವೆಗಳನ್ನು ನಿರ್ಮಿಸುವ ಮೂಲಕ ಸುರಕ್ಷಿತ ಪಯಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ರೈಲ್ವೆ ಹಳಿ ದಾಟುವ ವೇಳೆ ಸಂಭವಿಸುವ ಅಪಘಾತಗಳನ್ನು ತಡೆಯಲು, ಜನರು ರೈಲ್ವೆ ಹಳಿ ಕ್ರಾಸಿಂಗ್‌ಗಾಗಿ ಸುತ್ತಿ ಬಳಸಿ ಬರುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವು 10 ವರ್ಷಗಳಿಂದ ದೇಶಾದ್ಯಂತ ಕೆಳ ಸೇತುವೆ ಮತ್ತು ಮೇಲ್ಸೇತುವೆ ನಿರ್ಮಾಣ ಮಾಡುತ್ತಿದೆ ಎಂದು ಹೇಳಿದರು.
ದಡದಹಳ್ಳಿಯ ಕೆಳ ಸೇತುವೆ ಮಾದರಿಯಲ್ಲಿ ಮೈಸೂರಿನ ಕುಕ್ಕರಹಳ್ಳಿ ಕೆರೆ ಮತ್ತು ಕೆ.ಆರ್.ಎಸ್ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಸದ್ಯದಲ್ಲಿ ಟೆಂಡರ್ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ರೈಲ್ವೆ ವಿಭಾಗೀಯ ಇಂಜಿನಿಯರ್ ರವಿಚಂದ್ರನ್, ಸಹಾಯಕ ಇಂಜಿನಿಯರ್ ರಾಘವೇಂದ್ರ ಇನ್ನಿತರರಿದ್ದರು.