ನಾಲ್ವಡಿ ರೈತರ ಬಾಳಿಕ ಆಶಾಕಿರಣ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಬಣ್ಣನೆ

Inauguration of Putthali in Sampahalli village Mandya
Published on
ಮಂಡ್ಯ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ರೈತರ ಬಾಳಿನ ಆಶಾಕಿರಣ ಹಾಗೂ ನೊಂದವರ ಪಾಲಿನ ಕಾಮಧೇನುವಾಗಿ ಸಮಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹನೀಯ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಶ್ಲಾಘಿಸಿದರು.
ತಾಲೂಕಿನ ಸಂಪಳಿ ಗ್ರಾಮದಲ್ಲಿ ಭಾನುವಾರ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್‌ಎಂ.ವಿಶ್ವೇಶ್ವರಯ್ಯ ಹಾಗೂ ಕಾವೇರಿ ಮಾತೆ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಆಧುನಿಕ ಕನ್ನಡ ನಾಡಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಆಗಿದ್ದಾರೆ, ಅವರು ಹಾಕಿರುವ ಸಮಾಜದಲ್ಲಿನ ಬೇಧ ಭಾವ ಹೋಗಲಾಡಿಸಿದ್ದರು. ಕೃಷಿ, ಶಿಕ್ಷಣ ಹಾಗೂ ಕಾರ್ಖಾನೆಗಳ ಅಭಿವೃದ್ಧಿಗೆ ಹಾಕಿರುವ ಅಡಿಪಾಯ ಇಂದಿಗೂ ಗಮನ ಸೆಳೆಯುತ್ತವೆ ಎಂದರು.
ಕಾವೇರಿಕೊಳ್ಳದ ರೈತರಿಗೆ ನೆರವಾಗಲೆಂದು ಕೆ.ಆರ್‌.ಎಸ್‌ ಅಣೆಕಟ್ಟೆ ಕಟ್ಟಿಸಿದ ಪುಣ್ಯಾತ್ಮ ನಾಲ್ವಡಿ. ಆ ಮೂಲಕ ಕುಡಿಯುವ ನೀರಿನ ಅಭಾವ ಹಾಗೂ ವಿದ್ಯುತ್‌ ತಯಾರಿಕಾ ಘಟಕಗಳಿಗೆ ನಾಂದಿ ಹಾಡಿ ಬಡವರ ಆಶಾಕಿರಣವಾಗಿ ಕಾಣಿಸಿಕೊಂಡರು. ಅವರ ಆದರ್ಶವನ್ನು ಎಲ್ಲರೂ ಮೈಗೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಾವಿದ ಬಸವರಾಜು ಮಾತನಾಡಿ, ಏಷಿಯಾ ಖಂಡದಲ್ಲೇ ಮೊದಲ ಜಲವಿದ್ಯುತ್ ಯೋಜನೆ ಸ್ಥಾಪಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಸರ್‌ಎಂ.ವಿಶ್ವೇಶ್ವರಯ್ಯ ಅವರು ದಿವಾನರಾಗಿದ್ದ ಕಾಲದಲ್ಲಿ ಜನರಿಗೆ ಉಪಯುಕ್ತ ಕಾರ್ಯಗಳನ್ನು ಮಾಡಿದ್ದರು, ಜತೆಗೆ ಜಿಲ್ಲೆಯ ಜೀವನಾಡಿಯಾದ ಕಾವೇರಿ ಮಾತೆಯ ಪುತ್ಥಳಿಯನ್ನು ನಮ್ಮೂರಿನಲ್ಲಿ ಸ್ಥಾಪಿಸಿ ಸದಾ ಸ್ಮರಣೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಮುಖಂಡರಾದ ಶಿವಶಂಕರ್, ಯೋಗಾನಂದ, ಮಂಜು, ಜಯರಾಮ್, ವೆಂಕಟೇಶ್, ಎಂ.ಜವರೇಗೌಡ, ರಾಮಕೃಷ್ಣ, ಬಸವ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net