

ಲಕ್ಷ್ಮೇಶ್ವರ: ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಪರಂಪರೆಯನ್ನು ನಾಡಿಗೆ ಪ್ರಚುರಪಡಿಸುವ ಕಾರ್ಯ ಮಾಡುತ್ತಿರುವ ದೇವಸ್ಥಾನ ಕಮಿಟಿಯ ಕಾರ್ಯ ಶ್ಲಾಘನೀಯ ಎಂದು ತಹಸೀಲ್ದಾರ್ ಮಂಜುನಾಥ ಅಮಾಸಿ ಹೇಳಿದರು.
ಪಟ್ಟಣದ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಪುಲಿಗೆರೆ ಪೌರ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಈ ನೆಲದ ಪರಂಪರೆ, ಈ ಶ್ರೀಮಂತಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರೊ. ಸಿ.ವಿ. ಕೆರಿಮನಿ ಅವರ ಸೇವೆ ಸ್ಮರಣೀಯ ಎಂದರು.
ಸಾಹಿತಿ ರಮೇಶ ನವಲೆ ಮಾತನಾಡಿ, ದಿ.ಪ್ರೊ.ಸಿ.ವಿ. ಕೆರಿಮನಿ ಅವರು ಪುಲಿಗೆರೆ ಸೋಮೇಶ್ವರ ದೇವಸ್ಥಾನ ಸೇರಿ ಇಲ್ಲಿನ ಧಾರ್ಮಿಕ, ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದ ಹಿರಿಮೆ-ಗರಿಮೆ ಹೆಚ್ಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಗೆ ಸಂದ ಅನೇಕ ಪ್ರಶಸ್ತಿ ಅವರ ಹಿರಿಮೆಗೆ ಸಾಕ್ಷಿಯಾಗಿವೆ. ವಿದ್ಯಾರ್ಥಿಗಳು, ಸಾಹಿತ್ಯಾಭಿಮಾನಿಗಳ ಹೃದಯದಲ್ಲಿ ಅಮರವಾಗಿದ್ದಾರೆ. ಸಾರ್ಥಕ ಬದುಕು ಸಾಗಿಸಿದ್ದಾರೆ. ಪುಲಿಗೆರೆಗೆ ಸೋಮೇಶ್ವರ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಿದ್ದು ಶಿವಶರಣ ಆದಯ್ಯನಾದರೆ, ನಾಡಿನಲ್ಲೆಡೆ ಪುಲಿಗೆರೆಯ ಕೀರ್ತಿ ಪಸರಿಸುವಂತೆ ಮಾಡಿದ ಶ್ರೇಯಸ್ಸು ಪ್ರೊ. ಸಿ.ವಿ. ಕೆರಿಮನಿಯವರಿಗೆ ಸಲ್ಲುತ್ತದೆ ಎಂದರು.
ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ವಿರೂಪಾಕ್ಷಪ್ಪ ಗಿರಡ್ಡಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಕೆ.ಎಸ್. ಕೊಡ್ಲಿವಾಡ, ಸಾಂಸ್ಕೃತಿಕ ಚಿಂತಕಿ ಸರೋಜಕ್ಕ ಬನ್ನೂರ ಮಾತನಾಡಿದರು. ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಐ.ಬಿ. ಜಕ್ಕನಗೌಡರ, ತಹಸೀಲ್ದಾರ್ ಮಂಜುನಾಥ ಅಮಾಸಿ ಆವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ರಾಂತ ಉಪನ್ಯಾಸಕ ಆರ್.ಎನ್. ಪಾಟೀಲ, ಹಿರಿಯ ಚಿಂತಕ ಡಿ.ಬಿ. ಬಳಿಗಾರ, ಬಿ.ಎಸ್. ಬಾಳೇಶ್ವರಮಠ, ನೀಲಪ್ಪ ಕರ್ಜಕಣ್ಣವರ, ಎಂ. ಸಿದ್ಧಲಿಂಗಯ್ಯ, ಗೋಪಾಲ ನಾಯಕ, ಶೇಖಣ್ಣ ಹುರಕಡ್ಲಿ, ಸುರೇಶ ರಾಚನಾಯ್ಕರ, ಎಲ್.ಆರ್. ಮಲಸಮುದ್ರ, ನಾಗರಾಜ ತೋಟದ, ಶೈಲಾ ಆದಿ, ಎಂ.ಎಸ್. ಹಿರೇಮಠ, ಸೋಮು ಕೆರಿಮನಿ ಪರಿವಾರ, ನಾಗರಾಜ ಕಳಸಾಪುರ, ಚಂದ್ರು ನೇಕಾರ, ಜಯಪ್ರಕಾಶ ಹೊಟ್ಟಿ, ಇತರರಿದ್ದರು.