ಗ್ರಾಮಾಂತರ ಜನರಿಗೂ ಗುಣಮಟ್ಟದ ಚಿಕಿತ್ಸೆ : ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ಶುಭನುಡಿ

New Project (8)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಆಧುನಿಕ ತಂತ್ರಜ್ಞಾನದೊಂದಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಪ್ರಸಾದ್ ನೇತ್ರಾಲಯ ಮೂಡುಬಿದಿರೆಯಲ್ಲಿ ಪ್ರಾರಂಭಗೊಂಡಿರುವುದು ಆಶಾದಾಯಕ ಬೆಳವಣಿಗೆ. ಉತ್ತಮ ಗುಣಮಟ್ಟದ ಕಣ್ಣಿನ ಚಿಕಿತ್ಸೆ ಮೂಡುಬಿದಿರೆ ತಾಲೂಕು ಹಾಗೂ ಆಸುಪಾಸಿನ ಗ್ರಾಮಾಂತರ ಜನರಿಗೂ ಸಿಗುವಂತಾಗಲಿ ಎಂದು ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಮೂಡುಬಿದಿರೆಯ ಬಡಗ ಬಸದಿ ಎದುರಿನ ಫಾರ್ಚೂನ್-2 ಕಟ್ಟಡದಲ್ಲಿ ಭಾನುವಾರ ಕರಾವಳಿ ಕರ್ನಾಟಕದ ಕಣ್ಣಿನ ಆಸ್ಪತ್ರೆಗಳ ದೊಡ್ಡ ನೆಟ್‌ವರ್ಕ್ ಹೊಂದಿರುವ ಪ್ರಸಾದ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ 10ನೇ ಸುಸಜ್ಜಿತ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಆಸ್ಪತ್ರೆ ಉದ್ಘಾಟಿಸಿ, ಕಣ್ಣಿನ ಸಣ್ಣಪುಟ್ಟ ದೋಷಗಳು ಬಂದಾಗ ನಿರ್ಲಕ್ಷೃ ಮಾಡದೆ ಸಕಾಲಯದಲ್ಲಿ ಚಿಕಿತ್ಸೆ, ವೈದ್ಯರ ಸಲಹೆ ಪಡೆದು ಮುಂದುವರಿಯಬೇಕು. ಪ್ರಸಾದ್ ನೇತ್ರಾಲಯ ಕಣ್ಣಿನ ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟಂತೆ ಉತ್ತಮ, ನುರಿತ ವೈದ್ಯರನ್ನು ಹೊಂದಿದೆ. ಇಂದು ತಂತ್ರಜ್ಞಾನದೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯುಂಟಾಗಿದೆ ಎಂದರು.

ಶಾಸಕ ಉಮಾನಾಥ ಎ.ಕೋಟ್ಯಾನ್ ಅಧ್ಯಕ್ಷತೆ ವಹಿಸಿ, ಅನಾರೋಗ್ಯ ಪೀಡಿತರು ಸಮಸ್ಯೆ ಹೇಳುವಾಗ, ಅದನ್ನು ಸರಿಯಾಗಿ ಕೇಳುವ ತಾಳ್ಮೆ ವೈದ್ಯರಲ್ಲಿ ಇರಬೇಕು. ವೈದ್ಯರ ಮಾರ್ಗದರ್ಶನ, ಮಾತುಗಳಿಂದ ರೋಗಿಗಳ ಶೇ.50 ಚಿಂತೆ ಕಡಿಮೆಯಾಗುತ್ತದೆ. ನೇತ್ರ ಚಿಕಿತ್ಸಾ ಕ್ಷೇತ್ರದಲ್ಲಿ ಪ್ರಸಾದ್ ನೇತ್ರಾಲಯವು ಗುಣಮಟ್ಟದ ಚಿಕಿತ್ಸೆಗೆ ಹೆಸರುವಾಸಿಯಾಗಿದೆ ಎಂದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಸದಸ್ಯ ಪಿ.ಕೆ.ಥೋಮಸ್, ಉದ್ಯಮಿ ಮಹೇಂದ್ರವರ್ಮ ಜೈನ್ ಮುಖ್ಯ ಅತಿಥಿಯಾಗಿದ್ದರು. ಆಸ್ಪತ್ರೆ ನಿರ್ಮಾಣಕ್ಕೆ ಸಹಕರಿಸಿದ ಆದಿತ್ಯ ಹಾಗೂ ರಾಜೇಶ್ ಕೂಡ್ಲು ಅವರನ್ನು ಸನ್ಮಾನಿಸಲಾಯಿತು. ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ನಿರ್ದೇಶಕರಾದ ರಘುರಾಮ್ ರಾವ್, ರಶ್ಮಿ ಕೃಷ್ಣಪ್ರಸಾದ್, ಪ್ರಸಾದ್ ನೇತ್ರಾಲಯ ಮೂಡುಬಿದಿರೆ ಆಸ್ಪತ್ರೆ ಆಡಳಿತ ನಿರ್ದೇಶಕರಾದ ಡಾ.ಸ್ಮತಿ, ಡಾ.ವಿಕ್ರಮ್ ಜೈನ್, ಡಾ.ಹರೀಶ್ ಉಪಸ್ಥಿತರಿದ್ದರು. ಪ್ರೊ.ಬಾಲಕೃಷ್ಣ ಮಡ್ಡೋಡಿ ನಿರೂಪಿಸಿದರು.

ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನ

23 ವರ್ಷಗಳಲ್ಲಿ 2 ಲಕ್ಷಕ್ಕೂ ಅಧಿಕ ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ಅದರಲ್ಲೂ 1 ಲಕ್ಷದಷ್ಟು ಉಚಿತ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. 6 ಸಾವಿರ ಕಣ್ಣಿನ ಉಚಿತ ಶಿಬಿರ ಮಾಡಿದ್ದೇವೆ. ಈ ಶಿಬಿರಗಳು ಕೇವಲ ಉಭಯ ಜಿಲ್ಲೆಗಳು ಅಲ್ಲದೆ ರಾಜ್ಯದ ಇತರ ಜಿಲ್ಲೆಗಳು, ನೆರೆಯ ರಾಜ್ಯಗಳಲ್ಲೂ ಆಯೋಜಿಸಿದ್ದೇವೆ. ವಿಶ್ವದ ನಂ.1 ಕಣ್ಣಿನ ಆಸ್ಪತ್ರೆಗಳಲ್ಲಿ ಇರುವ ಅತ್ಯಾಧುನಿಕ ತಂತ್ರಜ್ಞಾನ ನಾವು ಬಳಸುತ್ತಿದ್ದೇವೆ ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಕೂಡ್ಲು ತಿಳಿಸಿದರು.

ಕಣ್ಣು ದೇಹದ ವಿಶಿಷ್ಟ ಹಾಗೂ ಸೂಕ್ಷ್ಮವಾದ ಭಾಗ. ಪ್ರಸಾದ್ ನೇತ್ರಾಲಯ ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಅವಿಭಜಿತ ಜಿಲ್ಲೆಗೆ ಕೀರ್ತಿ ತಂದಿದೆ. ಶಿಬಿರಗಳ ಮೂಲಕ ಕಣ್ಣಿನ ತಜ್ಞ ವೈದ್ಯರನ್ನು ಗ್ರಾಮೀಣ ಭಾಗಗಳಿಗೆ ತಲುಪಿಸಿ ಕಣ್ಣಿನ ತಪಾಸಣೆ, ಜನರಲ್ಲಿ ಕಣ್ಣಿನ ಆರೋಗ್ಯದ ಕುರಿತು ಪ್ರಜ್ಞೆ ಮೂಡಿಸುತ್ತಿರುವುದು ಶ್ಲಾಘನೀಯ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಮೂಡುಬಿದಿರೆ ಶ್ರೀ ಜೈನಮಠ https://www.vijayavani.net/parking-problem-2 https://www.vijayavani.net/alvas-college-tech-festival

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net