

ಮಡಿಕೇರಿ: ಬೆಂಗಳೂರಿನ ಪ್ರಣವ್ ಫೌಂಡೇಶನ್ ವತಿಯಿಂದ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿಯಲ್ಲಿ ನಿರ್ಮಿಸಿದ ಪ್ರಣವ ಸೇತು ಸೇತುವೆಯನ್ನು ಗ್ರಾಮಸ್ಥರೊಂದಿಗೆ ಪ್ರಣವ್ ಫೌಂಡೇಶನ್ ಪ್ರಮುಖರು ಉದ್ಘಾಟನೆ ಮಾಡಿದರು.
ಈ ಮೂಲಕ ಗ್ರಾಮಸ್ಥರ ೩೦ ವರ್ಷಗಳ ಕನಸು ಸಾಕಾರಗೊಂಡಿದೆ. ಸಮಸ್ಯೆಯ ನಿವಾರಣೆಗೆ ಪ್ರಣವ್ ಫೌಂಡೇಶನ್ ೨.೫೦ ಲಕ್ಷ ರೂ. ವೆಚ್ಚದಲ್ಲಿ ೨೪ ಮೀಟರ್ ಉದ್ದದ ಸೇತುವೆ ನಿರ್ಮಿಸಿದೆ. ತೂಗುಸೇತುವೆಗಳ ಸರದಾರ, ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರ ತಂಡ ಸೇತುವೆ ನಿರ್ಮಿಸಿದೆ.
ಈ ಸಂದರ್ಭ ಅತ್ಯಾಡಿ ಗ್ರಾಮದ ಮನುಜ ಮಾತನಾಡಿ, ೩೦ ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. ಮಳೆಗಾಲದಲ್ಲಿ ಹೊಳೆ ದಾಟಲು ಬಹಳ ಕಷ್ಟವಾಗುತ್ತಿತ್ತು. ಬಿದಿರಿನ ಪಾಲವಿದ್ದರೂ, ಭಯದಿಂದ ಓಡಾಡಬೇಕಾಗಿತ್ತು. ಈಗ ಉಕ್ಕಿನ ಸೇತುವೆ ನಮಗೆ ದೊರೆತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಅತ್ಯಾಡಿ ಗ್ರಾಮದ ವಿದ್ಯಾರ್ಥಿನಿ ಸುತನ್ ಮಾತನಾಡಿ, ಮಳೆಗಾಲದಲ್ಲಿ ಬಿದಿರಿನ ಪಾಲ ಜಾರುತ್ತಿತ್ತು. ಉಕ್ಕಿನ ಸೇತುವೆಯಿಂದ ನಮ್ಮ ಗ್ರಾಮದ ವಿದ್ಯಾರ್ಥಿಗಳು, ಅಂಗವಿಕಲರು, ಹಿರಿಯ ನಾಗರಿಕರು ಓಡಾಡಲು ಅನುಕೂಲವಾಗಿದೆ ಎಂದರು.
ಸ್ಥಳೀಯ ನಿವಾಸಿ ನಿತ್ಯಾನಂದ ಮಾತನಾಡಿ, ನಾನು ವಿಶೇಷಚೇತನ. ಈ ಹಿಂದೆ ಮರದ ದಿಮ್ಮಿಗಳ ಪಾಲ ಇದ್ದಾಗ ಓಡಾಡಲು ಕಷ್ಟವಾಗುತ್ತಿತ್ತು. ಉಕ್ಕಿನ ಗಟ್ಟಿ ಸೇತುವೆ ನಮಗೆ ದೊರೆತಿದೆ. ಇನ್ನು ಅಂಜಿಕೆ ಇಲ್ಲದೆ ಓಡಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಪ್ರಣವ್ ಫೌಂಡೇಶನ್ ಅಧ್ಯಕ್ಷ ರಾಕೇಶ್ ರೈ, ಕಾರ್ಯದರ್ಶಿ ನಾಗರಾಜ ಹೆಬ್ಬಾಳ್, ಮಾಧ್ಯಮ ಸಲಹೆಗಾರ ಕಾರ್ತಿಕ್ ಭಟ್, ಟ್ರಸ್ಟಿಗಳಾದ ಎನ್.ನೇತ್ರ, ಮಹೇಶ್ ಕುಮಾರ್ ಮೇನಾಲ, ಮಂಜುನಾಥ ಭಟ್, ಕೆ.ಪಿ.ರಕ್ಷಿತ್, ಯೋಜನೆ ಸಂಯೋಜಕ ದೇವಿಪ್ರಸಾದ್ ಅತ್ಯಾಡಿ, ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಉಪಸ್ಥಿತರಿದ್ದರು.