

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಮಹಿಳಾ ಸಬಲೀಕರಣ ಪೂರಕವಾಗಿದ್ದು, ಸಮುದಾಯದ ಮಹಿಳೆಯರು ಸಂಘಟಿತರಾಗುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಒಕ್ಕಲಿಗರ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಕೆಂಪೇಗೌಡ ಮಹಿಳಾ ಒಕ್ಕಲಿಗರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲ ಹಂತಗಳಲ್ಲಿ ಮಹಿಳೆಯರು ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಮಹಿಳೆಯರು ಸಮುದಾಯದ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಪಾರಂಪರಿಕವಾಗಿಯೂ ಒಕ್ಕಲುತನದ ಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ ಎಂಬುದು ಶ್ಲಾಘನೀಯ ಎಂದರು. ಮಾಜಿ ಶಾಸಕ ವಿ.ಕೃಷ್ಣಪ್ಪ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಮಟ್ಟದ ಕೆಂಪೇಗೌಡ ಮಹಿಳಾ ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಬಂದಿರುವುದು ಸಂತಸದ ವಿಚಾರ. ಎಲ್ಲ ಹಂತಗಳಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ಮಹಿಳೆಯರು ಸಂಘಟನೆಯ ಮೂಲಕ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರ ಸೇರಿ ವಿವಿಧ ವಲಯಗಳಲ್ಲಿ ಮುಂದುವರಿಯಲು ಕಾರ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಿದೆ ಎಂದರು.
ಒಕ್ಕಲಿಗರ ಸಂಘದ ನಿರ್ದೇಶಕ ರಮೇಶ್, ಕೆಂಪೇಗೌಡ ಒಕ್ಕಲಿಗರ ಸಂಘದ ಉಪಾಧ್ಯಕ್ಷೆಯರಾದ ವರಲಕ್ಷ್ಮೀ, ಮಂಗಳಾ, ಕಾರ್ಯದರ್ಶಿ ಲಕ್ಷ್ಮೀ, ಖಜಾಂಚಿ ರತ್ನಮ್ಮ, ಸದಸ್ಯರಾದ ಕಲ್ಪನಾ ಆನಂದ್, ಶೋಭಾ, ಮಮತಾ, ಸಾವಿತ್ರಮ್ಮ, ರಾಧಾ ನಾಗೇಶ್, ಭಾಗ್ಯಾ ವೆಂಕಟೇಶ್ ಇದ್ದರು.