ಅಡಕೆ ಕೃಷಿಕರ ಜೀವಾಳ ಮಾಸ್ : ಶಾಸಕಿ ಭಾಗೀರಥಿ ಮುರುಳ್ಯ ಪ್ರಶಂಸೆ

New Project (2)
Published on

ಸುಬ್ರಹ್ಮಣ್ಯ: ಮಾಸ್ ಸಂಸ್ಥೆ ಅಡಕೆ ಕೃಷಿಕರ ಜೀವಾಳ. ಮಾಸ್ ಮೂಲಕ ಅಡಕೆಗೆ ಉತ್ತಮ ದರ ದೊರೆಯುಂತಾಗಲಿ. ಕೃಷಿಕರಿಗೆ ಮಾರ್ಗದರ್ಶನ, ತರಬೇತಿ ನೀಡುವ ಮೂಲಕ ಅಡಕೆ ಕೃಷಿಕರಿಗೆ ಧೈರ್ಯ ತುಂಬುವ ಕೆಲಸ ಮಾಸ್‌ನಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಂಗಳೂರು(ಮಾಸ್ ಲಿಮಿಟೆಡ್) ವತಿಯಿಂದ ನಿಂತಿಕಲ್ಲಿನ ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರದೊಂದಿಗೆ ನಿಂತಿಕಲ್ಲಿನಲ್ಲಿ ಸಾಧನಾ ಸಹಕಾರಿ ಸೌಧದಲ್ಲಿ ಆರಂಭಗೊಂಡ ಅಡಕೆ ಖರೀದಿ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು ಅಧ್ಯಕ್ಷತೆ ವಹಿಸಿ ಮಾತನಾಡಿ, ಸವಣೂರು ಸೀತಾರಾಮ ರೈ ನೇತೃತ್ವದಲ್ಲಿ ಮಾಸ್ ಸಂಸ್ಥೆ ಅಗಾಧವಾಗಿ ಬೆಳೆಯುತ್ತಿದೆ. ಅವರ ದೂರದೃಷ್ಟಿಯ ಕೆಲಸದಿಂದ ಉತ್ತಮ ಬೆಳವಣಿಗೆ ಸಾಧಿಸಿ ಭರವಸೆ ಮೂಡಿಸಿದೆ ಎಂದರು.

ಪ್ರಮುಖರಾದ ಕೆ.ಪ್ರಸನ್ನ, ಎಣ್ಮೂರು ಮುರುಳ್ಯ ಎಣ್ಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕುಸುಮಾವತಿ ರೈ.ಕೆ.ಜಿ, ಮುರುಳ್ಯ ಗ್ರಾಪಂ ಅಧ್ಯಕ್ಷೆ ವನಿತಾ ಸುವರ್ಣ ಬಿ., ಉಪಾಧ್ಯಕ್ಷೆ ದಿವ್ಯಾ ಯೋಗಾನಂದ ಉಳ್ಳಲಾಡಿ, ಪ್ರಗತಿಪರ ಕೃಷಿಕ ಪಿ. ರಾಮಚಂದ್ರ ಭಟ್ ದೇವಸ್ಯ ಮುಖ್ಯಅತಿಥಿಗಳಾಗಿದ್ದರು. ಮಾಸ್ ಲಿಮಿಟೆಡ್‌ನ ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ರಾಜೀವಿ ಆರ್.ರೈ, ಪಿ.ರಾಜಾರಾಮ ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಮಹಾಬಲೇಶ್ವರ ಭಟ್, ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ.ಲೋಕೇಶ್, ಸುಳ್ಯ ಶಾಖಾ ವ್ಯವಸ್ಥಾಪಕ ಧನಂಜಯ ಮೇರ್ಕಜೆ ಇದ್ದರು.

ಮಾಸ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಮಹಾಬಲೇಶ್ವರ ಭಟ್ ವಂದಿಸಿದರು. ಚಂದ್ರಶೇಖರ ಪಿ.ಮತ್ತು ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಎನ್.ನಿರೂಪಿಸಿದರು.

ಸುಳ್ಯದಲ್ಲಿ ಸಂಸ್ಕರಣಾ ಕೇಂದ್ರ

ಮಾಸ್ ಲಿಮಿಟೆಡ್ ವತಿಯಿಂದ ಸುಳ್ಯದಲ್ಲಿ ಅಡಕೆ ಸಂಸ್ಕರಣಾ ಕೇಂದ್ರ, ಸುಳ್ಯದ ಎಪಿಎಂಸಿ ಯಾರ್ಡ್‌ನಲ್ಲಿ ಮಾಸ್‌ನ ಸುಳ್ಯ ಅಡಕೆ ಖರೀದಿ ಕೇಂದ್ರ ಕಾರ್ಯಾಚರಿಸುತ್ತಿದೆ. ಇಲ್ಲಿ ಇನ್ನೂ ಎರಡು ಹೆಚ್ಚುವರಿ ಗೋದಾಮು ಪಡೆಯಲು ಪ್ರಯತ್ನ ನಡೆಯುತ್ತಿದ್ದು, ಲಭ್ಯವಾದ ಕೂಡಲೇ ಅಡಕೆ ಸಂಸ್ಕರಣಾ ಕೇಂದ್ರ ಆರಂಭಿಸಲಾಗುವುದು. ಸುಳ್ಯ, ಪುತ್ತೂರು, ಕಡಬ ತಾಲೂಕುಗಳಿಂದ ಖರೀದಿ ಮಾಡುವ ಅಡಕೆಯನ್ನು ಸುಳ್ಯದಲ್ಲಿ ಸಂಸ್ಕರಿಸಿ ಪ್ಯಾಕ್ ಮಾಡಿ ಉತ್ತರ ಭಾರತಕ್ಕೆ ಕಳಿಸುವ ವ್ಯವಸ್ಥೆಯಾಗಲಿದೆ. ಅಡಕೆಯನ್ನು ಉತ್ತಮ ಬೆಲೆಗೆ ಖರೀದಿಸಿ, ಸಂಸ್ಕರಿಸಿ, ಉತ್ತರ ಭಾರತಕ್ಕೆ ಮಾರಾಟ ಮಾಡುವ ಮೂಲಕ ಬೆಲೆಯಲ್ಲಿ ಸ್ಥಿರತೆ ಮತ್ತು ವರ್ಷವಿಡೀ ಕೃಷಿಕರ ಅಡಕೆ ಖರೀದಿಗೆ ಮಾರುಕಟ್ಟೆಯನ್ನು ಒದಗಿಸಲು ಇದರಿಂದ ಸಹಕಾರಿಯಾಗಲಿದೆ ಎಂದು ಮಾಸ್ ಸಂಸ್ಥೆ ಅಧ್ಯಕ್ಷ ಸವಣೂರು ಸೀತಾರಾಮ ರೈ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net