ನ್ಯೂಕ್ಲಿಯರ್ ಪ್ರದರ್ಶನಾಲಯ ಉದ್ಘಾಟನೆ

8 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮುಂಬೈನ ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿ. ಸಹಾಯ ಧನದಲ್ಲಿ ನಿರ್ಮಿಸಿರುವ ಮಿನಿಯೇಚರ್ ನ್ಯೂಕ್ಲಿಯರ್ ಪ್ರದರ್ಶನಾಲಯವನ್ನು ಕವಿವಿ ಕುಲಪತಿ ಡಾ. ಕೆ.ಬಿ. ಗುಡಸಿ ಬುಧವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನ್ಯೂಕ್ಲಿಯರ್ ಪ್ರದರ್ಶನಾಲಯವು ವಿಜ್ಞಾನ ಕೇಂದ್ರಕ್ಕೆ ಮತ್ತೊಂದು ಗರಿಯಂತಾಗಿದೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಅಣು ವಿದ್ಯುತ್ ಸ್ಥಾವರದ ಬಗ್ಗೆ ಪೂರ್ಣ ಮಾಹಿತಿ ಸಿಗಲಿದ್ದು, ಸ್ಥಾವರದ ಕಾರ್ಯ ವೈಖರಿ, ಸುರಕ್ಷತೆ ಮತ್ತು ಇತರ ಮಾಹಿತಿಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನ್ವೇಷಣೆಗಳನ್ನು ಮಾಡಲು ಸಹಾಯವಾಗಲಿದೆ ಎಂದರು.
ಅಮ್ರಿತೇಶ ಶ್ರೀವಾತ್ಸವ ಮಾತನಾಡಿ, ಹೆಚ್ಚು ಜನಸಂಖ್ಯೆ ಹೊಂದಿದ ಭಾರತದಲ್ಲಿ ಅಣು ವಿದ್ಯುತ್ ಶಕ್ತಿ ಪಾಲುದಾರಿಕೆ ಕಡಿಮೆ ಪ್ರಮಾಣದಲ್ಲಿದೆ. ಇದಕ್ಕೆ ಕಾರಣ ಜನರಲ್ಲಿ ಅಣು ವಿದ್ಯುತ್ ಶಕ್ತಿ ಹಾಗೂ ವಿಕಿರಣಗಳನ್ನು ಹೊರಸೂಸುವಿಕೆ ಬಗ್ಗೆ ಇರುವ ತಪ್ಪು ನಂಬಿಕೆ. ಅಣು ವಿದ್ಯುತ್ ಶಕ್ತಿ ಸಾಮರ್ಥ್ಯ ಹೆಚ್ಚಿನ ಮಟ್ಟದಲ್ಲಿದ್ದು, ಪರಿಸರ ಮಾಲಿನ್ಯ ಉಂಟು ಮಾಡುವುದಿಲ್ಲ. ಆದರೆ ಉಷ್ಣ ವಿದ್ಯುತ್ ಸ್ಥಾವರದಿಂದ ಬಿಡುಗಡೆ ಆಗುವ ಇಂಗಾಲದ ಡೈ ಆಕ್ಸೈಡ್‌ನಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಹೀಗಾಗಿ ಜನರಲ್ಲಿ ಅಣು ವಿದ್ಯುತ್ ಸ್ಥಾವರದ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಿ ಸುರಕ್ಷತೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ದೇಶದ ಎಲ್ಲ ಭಾಗಗಳಲ್ಲಿ ನ್ಯೂಕ್ಲಿಯರ್ ಪ್ರದರ್ಶನಾಲಯ ಸ್ಥಾಪಿಸಲಾಗಿದ್ದು, ಪ್ರತಿಯೊಬ್ಬರು ಇದರ ಉಪಯೋಗ ಪಡೆಯಬೇಕು ಎಂದರು.
ಕುಲಸಚಿವ ಪ್ರೊ. ಚಂದ್ರಮಾ ಎಂ. ಮಾತನಾಡಿದರು. ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವಿ.ಡಿ.ಬೋಳಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೂಝರ್ ಭೋರ, ಸಂದೀಪ ರಂಜಣಗಿ, ಕವಿವಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net