ಪ್ರೆಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ

Inauguration of new office bearers of Press Club
Published on

ಮಡಿಕೇರಿ:

ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಸ್ಥಳೀಯ ಸಮಸ್ಯೆಗಳ ಪರಿಹಾರ ಕುರಿತು ಬೆಳಕು ಚೆಲ್ಲುವ ಕೆಲಸ ಪತ್ರಕರ್ತರಿಂದಾಗಬೇಕು ಎಂದು ಹಿರಿಯ ಪತ್ರಕರ್ತ ಜಿ. ರಾಜೇಂದ್ರ ಹೇಳಿದರು. ಭಾನುವಾರ ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್ ಸಭಾಂಗಣದಲ್ಲಿ ನಡೆದ 2024-27ನೇ ಸಾಲಿನ ಕೊಡಗು ಪ್ರೆಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರೆಸ್ ಕ್ಲಬ್ ರಜತ ಮಹೋತ್ಸವ ಯಶಸ್ವಿಯಾಗಿ ನಡೆದಿದೆ. ಪತ್ರಕರ್ತರಿಗೆ ಮರೆಯಲಾಗದ ನೆನಪನ್ನು ನೀಡಿದೆ. ಪತ್ರಕರ್ತರಿಗೆ ಮಾತ್ರವಲ್ಲದೆ ಎಲ್ಲಾ ವರ್ಗವರನ್ನು ಸೇರಿಸಿಕೊಂಡು ಒಂದು ವರ್ಷ ಕಾರ್ಯಕ್ರಮ ರೂಪಿಸಿದ್ದು ಮೈಲುಗಲ್ಲಾಗಿದೆ. ಸಂಘಟನೆ ಸಾರಥ್ಯ ವಹಿಸಿಕೊಳ್ಳುವುದು ಅತೀ ದೊಡ್ಡ ಜವಾಬ್ದಾರಿಯಾಗಿದೆ.
ಪತ್ರಕರ್ತರು ಸದಾ ಒತ್ತಡದಲ್ಲಿರುತ್ತಾರೆ. ಸಮಾಜದ ಬಗ್ಗೆ ಚಿಂತನೆ ಮಾಡುವ ನಾವು ನಮ್ಮ ವೈಯಕ್ತಿಕ ಬದುಕಿನ ಕುರಿತು ಚಿಂತಿಸುವುದಿಲ್ಲ. ಇಂದು ಆಡಳಿತ, ಜನಪ್ರತಿನಿಧಿಗಳು ಇಚ್ಛಾಶಕ್ತಿ ಮರೆತಿದ್ದಾರೆ. ರಾಜಕೀಯ ಮೇಲಾಟಗಳಿಂದ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತಿದೆ. ಸ್ಥಳೀಯ ಸಂಸ್ಥೆಗಳ ಸಭೆಗಳು ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗುತ್ತಿರುವುದು ವಿಪರ್ಯಾಸವಾಗಿದೆ ಎಂದರು.

ಪ್ರಗತಿಪರ ಕಾರ್ಯಗಳಿಗೆ ಸ್ಪಂದಿಸುವ ಕೆಲಸ ಪತ್ರಕರ್ತರಿಂದಾಗಬೇಕು. ಜನಪರ ಕಾಳಜಿ ಇರುವ ಪತ್ರಕರ್ತರ ಬೆನ್ನಿಗೆ ನಾವು ನಿಲ್ಲಬೇಕು. ಇದಕ್ಕೆ ಸಂಘಟನಾತ್ಮಕ ನಡೆ ಅನುಸರಿಸಬೇಕಾದ ಅನಿವಾರ್ಯತೆ ಇದೆ. ಸಚಿವರು, ಉನ್ನತಾಧಿಕಾರಿಗಳು ಆಗಮಿಸಿದ ಸಂದರ್ಭ ಸ್ಥಳೀಯ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಬೆಳಕು ಚೆಲ್ಲಿ ವೃತ್ತಿಯೊಂದಿಗೆ ಸಾಮಾಜಿಕ ಬದ್ಧತೆ ತೋರಬೇಕು. ಮಾಧ್ಯಮ ತರಬೇತಿ ಶಿಬಿರಗಳು, ಕೃತಕ ಬುದ್ದಿಮತ್ತೆ ಉಪಯೋಗದಂಥ ವಿಷಯಗಳ ಬಗ್ಗೆ ಪ್ರೆಸ್ ಕ್ಲಬ್ ತರಬೇತಿ ಕಾರ್ಯಕ್ರಮ ನಡೆಸಬೇಕು ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಕರ್ತರು ಸಂಘಟನಾತ್ಮಕವಾಗಿ ಮುಂದುವರೆಯಬೇಕಾದ ಅನಿವಾರ್ಯತೆ ಇದೆ. ಪತ್ರಕರ್ತರ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಆತಂಕಕಾರಿ. ಪದಾಧಿಕಾರಿಗಳ ಪರಸ್ಪರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.

ನೂತನ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರ ಸಹಕಾರದೊಂದಿಗೆ ಸಮರ್ಥವಾಗಿ ಕಾರ್ಯ ನಿಭಾಯಿಸುತ್ತೇವೆ. ಪತ್ರಕರ್ತರ ಸೌಹರ್ದ ಸಹಕಾರಿ ಸಂಘದಲ್ಲಿ ಕ್ಲಬ್ ನಿಂದ ಠೇವಣಿ ಇಡಲು ಮುಂದಾಗುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ, ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್, ಖಜಾಂಚಿ ಸಿ.ಪಿ.ತೇಜಸ್, ಸಂಘಟನಾ ಕಾರ್ಯದರ್ಶಿ ಕೆ.ಜೆ. ಶಿವರಾಜ್, ಸಹಕಾರ್ಯದರ್ಶಿ ವಿ.ವಿ.ಅರುಣ್ ಕುಮಾರ್, ನಿರ್ದೇಶಕರಾದ ಕೆ.ಎಂ. ವಿನೋದ್, ಮಾಗುಲು ಲೋಹಿತ್, ಕೆ.ಎಂ.ಇಸ್ಮಾಯಿಲ್ ಕಂಡಕೆರೆ, ಲೋಕೇಶ್ ಕಾಟಕೇರಿ, ಬಿ.ಜಿ.ಮಂಜು, ಬಿ.ಆರ್.ಸವಿತಾ ರೈ, ಮಚ್ಚಮಾಡ ಅನಿಶ್ ಮಾದಪ್ಪ ಅಧಿಕಾರ ಸ್ವೀಕರಿಸಿದರು.
ಇದೇ ಸಂದರ್ಭ ನಿರ್ಗಮಿತ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಜ್ಞಾ ರಾಜೇಂದ್ರ, ಆನಂದ್ ಕೊಡಗು, ಕೆ.ಜಿ.ಶಿವರಾಜು, ತೇಜಸ್ ಪಾಪಯ್ಯ ಇತರರು ಇದ್ದರು.


ಕಾರ್ಯಕ್ರಮದ ಅಂಗವಾಗಿ ಪ್ರೆಸ್ ಕ್ಲಬ್ ಸದಸ್ಯರಿಗೆ ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಒಂಟಿಕಾಲು ಓಟದಲ್ಲಿ ದಿವಾಕರ್ (ಪ್ರ), ಲೋಹಿತ್ (ದ್ವಿ), ಆದರ್ಶ್(ತೃ), ನಿಂಬೆ ಚಮಚ ಓಟದಲ್ಲಿ ವಿಶ್ಮಾ ಪೆಮ್ಮಯ್ಯ (ಪ್ರ), ಬಿ.ಆರ್.ಸವಿತಾ ರೈ (ದ್ವಿ), ಜಿ.ಆರ್.ಪ್ರಜ್ಞಾ (ತೃ), ಪಾಸಿಂಗ್ ದಿ ಬಾಲ್ ನಲ್ಲಿ ವಿಶ್ಮಾ ಪೆಮ್ಮಯ್ಯ (ಪ್ರ), ಮಂಜು ಸುವರ್ಣ (ದ್ವಿ),
ಜಿ.ರಾಜೇಂದ್ರ (ತೃ), ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಜಿ.ರಾಜೇಂದ್ರ (ಪ್ರ), ಲೋಹಿತ್ (ದ್ವಿ), ಆರ್.ಸುಬ್ರಮಣಿ (ತೃ) ವಿಜೇತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net