

ಬೆಂಗಳೂರು: ಸರ್ಕಾರ ನಿರ್ಮಿಸಿರುವ ಗ್ರಂಥಾಲಯಗಳನ್ನು ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಕೂಡ ತಮ್ಮ ಅಧ್ಯಯನಕ್ಕಾಗಿ ಲೈಬ್ರರಿ ಸೌಲಭ್ಯವನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ರಾಜ್ಯ ಗ್ರಾಂಥಾಲಯ ಇಲಾಖೆಯಿಂದ ನಗರ ಕೇಂದ್ರ ಗ್ರಂಥಾಲಯವು ಡಾ. ಶಿವರಾಮಕಾರಂತ ನಗರದ ಎಂಸಿಇಸಿಎಚ್‌ಎಸ್ ಬಡಾವಣೆಯಲ್ಲಿ ನಿರ್ಮಿಸಿರುವ ನೂತನ ಲೈಬ್ರರಿ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ನೂತನ ಕಟ್ಟಡವನ್ನು ದಿನಪತ್ರಿಕೆ, ಪುಸ್ತಕಗಳನ್ನು ಓದುವಷ್ಟಕ್ಕೇ ಸೀಮಿತಗೊಳಿಸದೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸೌಲಭ್ಯ ಕಲ್ಪಿಸಲಾಗಿದೆ. ಇ-ಲೈಬ್ರರಿ ಮೂಲಕ ಸಾವಿರಾರು ಪುಸ್ತಕಗಳು ಜ್ಞಾನಾರ್ಜನೆಗೆ ಲಭ್ಯವಿದೆ. ಸ್ಥಳೀಯರು ಮಾತ್ರವಲ್ಲದೆ ಸುತ್ತಮುತ್ತಲಿನ ಬಡಾವಣೆ, ಗ್ರಾಮಗಳ ನಿವಾಸಿಗಳು ಹೊಸ ಗ್ರಂಥಾಲಯದ ಸೌಲಭ್ಯದ ಪ್ರಯೋಜನ ಪಡೆಯಬೇಕು ಎಂದು ಸಚಿವರು ಮನವಿ ಮಾಡಿದರು.
1.2 ಕೋಟಿ ರೂ. ವೆಚ್ಚ:
ಶಿವರಾಮಕಾರಂತ ನಗರದಲ್ಲಿ ನಿರ್ಮಿಸಿರುವ ಗ್ರಂಥಾಲಯದ ಕಟ್ಟಡ, ಪೀಠೋಪಕರಣಕ್ಕೆ 1.2 ಕೋಟಿ ರೂ. ವೆಚ್ಚವಾಗಿದೆ. ಮೂರು ಮಹಡಿಗಳುಳ್ಳ ಕಟ್ಟಡದಲ್ಲಿ ವಾಚನಾಲಯ, ಇ-ಲೈಬ್ರರಿ, ಪುಸ್ತಕಗಳ ಅಧ್ಯಯನ ಹಾಗೂ ಮಕ್ಕಳಿಗೆ ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಲಾಗಿದೆ. ಸದ್ಯ 5 ಸಾವಿರ ಕೃತಿಗಳ ಸಂಗ್ರಹವಿದ್ದು, ಭವಿಷ್ಯದಲ್ಲಿ 10 ಸಾವಿರ ಕೃತಿಗಳನ್ನು ಓದುಗ ಬಳಗಕ್ಕೆ ನೀಡುವ ಗುರಿ ಹೊಂದಲಾಗಿದೆ ಎಂದು ಗ್ರಂಥಾಲಯದ ಅಧಿಕಾರಿಗಳು ತಿಳಿಸಿದರು.
ಇದೇ ವೇಳೆ ಗ್ರಂಥಾಲಯ ಆವರಣದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಶಿವರಾಮಕಾರಂತ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ಕೇಂದ್ರ ಗ್ರಂಥಾಲಯ ವಿಭಾಗದ ಉಪ ನಿರ್ದೇಶಕ ದಿವಾಕರ, ಡಾ. ಶಿವರಾಮಕಾರಂತ ನಗರದ 2ನೇ ಹಂತದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ರಾಜೇಶ್ ಇ.ಬಿ., ಎಂಸಿಇಸಿಎಚ್‌ಎಸ್ ಅಧ್ಯಕ್ಷ ಎ.ಎಂ.ಸಿದ್ದೇಶ ಗೌಡ ಮತ್ತಿತರರಿದ್ದರು.