ಎನ್‌ಎಸ್‌ಟಿಐನಲ್ಲಿ ನೂತನ ಹಾಸ್ಟೆಲ್ ಉದ್ಘಾಟನೆ; ಯುವಕರ ಸಬಲೀಕರಣಕ್ಕೆ ಕೇಂದ್ರದ ಕೊಡುಗೆ

NSTI
Published on

ಬೆಂಗಳೂರು: ರಾಷ್ಟ್ರೀಯ ಕೌಶಲ ತರಬೇತಿ ಸಂಸ್ಥೆ (ಎನ್‌ಎಸ್‌ಟಿಐ)ಯಲ್ಲಿ ನಿರ್ಮಿಸಲಾಗಿರುವ ನೂತನ ಹಾಸ್ಟೆಲ್‌ನ್ನು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ರಾಜ್ಯ ಖಾತೆ ಸಚಿವ ಜಯಂತ್ ಚೌಧರಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ವಿಕ್ಷಿತ್ ಭಾರತ್ 2047ರ ಸಂಕಲ್ಪದಲ್ಲಿ ಕೌಶಲಾಭಿವೃದ್ಧಿಗೆ ಪ್ರಮುಖ ಸ್ಥಾನವಿದೆ. ಯುವಕರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಕೌಶಲಗಳಿಗೆ ಬೇಕಾದ ಗುಣಮಟ್ಟದ ತರಬೇತಿ, ಮೂಲಸೌಕರ್ಯದಲ್ಲಿ ಹೂಡಿಕೆಗಳು ಅಗತ್ಯತೆಯ ಮಾಹಿತಿಯನ್ನು ನೀಡುವ ಅವಶ್ಯಕತೆ ಹೆಚ್ಚಾಗಿದ್ದು, ಎನ್‌ಎಸ್‌ಟಿಐ ಬೆಂಗಳೂರಿನಲ್ಲಿ ಇಂದು ಉದ್ಘಾಟನೆಯಾದ ನೂತನ ವಸತಿ ನಿಲಯ ಮಹತ್ವದ ಕೊಡುಗೆಯಾಗಿದೆ ಎಂದರು. ಯುವಕರು ತರಬೇತಿ, ನಾವೀನ್ಯತೆ, ಉದ್ಯಮ 4.0 ಗಾಗಿ ಸಿದ್ಧರಾಗಬೇಕು. ಯುವಕರಲ್ಲಿ ಅಂತಹ ಉತ್ಸಾಹ ಕಂಡುಬರುತ್ತಿರುವುದು ಭವಿಷ್ಯದ ಭಾರತಕ್ಕೆ ಉತ್ತಮ ಅಡಿಪಾಯವಾಗಿದೆ. ಈ ಸೌಲಭ್ಯದಿಂದ ಯುವಕರಿಗೆ ಉತ್ತಮ ತರಬೇತಿಯ ಜೊತೆಗೆ ಸುರಕ್ಷಿತ ವಸತಿ ದೊರೆಯಲಿದೆ. ಯುವಕರನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆ ಈ ಮೂಲಕ ಸಾಕಾರಗೊಳ್ಳುತ್ತದೆ ಎಂದು ಸಚಿವರು ವಿವರಿಸಿದರು. ಸಮಾರಂಭದಲ್ಲಿ ಎಂಎಸ್‌ಡಿಇ ಮಹಾನಿರ್ದೇಶಕಿ (ತರಬೇತಿ) ತ್ರಿಶಾಲ್‌ಜಿತ್ ಸೇತಿ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತೆ ಡಾ. ರಾಗಪ್ರಿಯಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಆಧುನಿಕ ಸೌಲಭ್ಯಗಳ ಬೃಹತ್ ವಸತಿ ನಿಲಯ

11.06 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವಸತಿ ನಿಲಯವು ಸುಮಾರು 3.5 ಸಾವಿರ ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, 60 ಪ್ರಶಿಕ್ಷಣಾರ್ಥಿಗಳಿಗೆ ಅವಕಾಶ ಕಲ್ಪಿಸಬಹುದಾಗಿದೆ. ಮೂರು ಮಹಡಿಗಳಲ್ಲಿ 30 ಅವಳಿ-ಹಂಚಿಕೆ ಕೊಠಡಿಗಳಿದ್ದು, ಅಧ್ಯಯನ ಕೊಠಡಿಗಳು, ಸಾಮುದಾಯಿಕ ಪ್ರದೇಶಗಳು ಮತ್ತು ಮನರಂಜನಾ ಸ್ಥಳಗಳಂತಹ ಅಗತ್ಯ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ವಿಶ್ವದರ್ಜೆಯ ಕೌಶಲಾಭಿವೃದ್ಧಿ ಮೂಲಸೌಕರ್ಯದಿಂದ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಕಲಿಕಾ ವಾತಾವರಣವನ್ನು ಸಕಾರಾತ್ಮಕವಾಗಿ ಹೆಚ್ಚಿಸಲು ವಸತಿ ನಿಲಯ ಪೂರಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net