ಆರ್.ವಿ. ಕಾಲೇಜು ಆವರಣದಲ್ಲಿ ‘ವಾಯು ಗುಣಮಟ್ಟ ಮಾಪನ ಕೇಂದ್ರ’ ಉದ್ಘಾಟನೆ

RVCE
Published on

ಬೆಂಗಳೂರು ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರದಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ)ವನ್ನು ತಿಳಿದುಕೊಳ್ಳುವ ಮನೋಭಾವ ರೂಢಿಸಿಕೊಳ್ಳುವಂತೆ ಪರಿಸರ ವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಪಿ. ರವಿ ತಿಳಿಸಿದರು.

ಮೈಸೂರು ರಸ್ತೆಯಲ್ಲಿರುವ ಆರ್.ವಿ. ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಗುರುವಾರ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸಹಯೋಗದಲ್ಲಿ ನಿರ್ಮಿಸಿರುವ ‘ವಾಯು ಗುಣಮಟ್ಟ ಮಾಪನ ಕೇಂದ್ರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರಿನ ಸಿಲ್ಕ್ ಬೋರ್ಡ್ ಸೇರಿ ಇತರೆ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಕಳಪೆಯಾಗಿದೆ. ಇದನ್ನು ತಿಳಿದುಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲು ಮುಂದಾಗಬೇಕು. ನಿಖರವಾದ ಮಾಹಿತಿಯನ್ನು ತಮ್ಮ ಮೊಬೈಲ್‌ಗಳಲ್ಲಿಯೇ ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಮಂಡಳಿ ಪ್ರಧಾನ ಪರಿಸರ ಅಧಿಕಾರಿ ಟಿ. ಮಹೇಶ್ ಮಾತನಾಡಿ, ದೇಶದಲ್ಲಿ 1981ರಲ್ಲಿ ಮೊದಲ ಬಾರಿಗೆ 2 ವಾಯುಗುಣಮಟ್ಟ ಮಾಪನಗಳನ್ನು ಅಳವಡಿಸಲಾಯಿತು. ಇಂದು ಸಾವಿರಾರು ಮಾಪನಗಳನ್ನು ನಿರ್ಮಿಸಲಾಗಿದೆ. ವಾಯು ಗುಣಮಟ್ಟ ಕಾಪಾಡಲು ಮಂಡಳಿಯು ಈಗಾಗಲೇ ಬಿಬಿಎಂಪಿ ಸಹಯೋಗದಲ್ಲಿ ಕ್ರಿಯಾಯೋಜನೆ ರೂಪಿಸಿದೆ. ಮುಂದಿನ 2 ವರ್ಷಗಳಲ್ಲಿ ನಗರದ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಕೆಲಸಕ್ಕೆ ಮುಂದಾಗಿದೆ ಎಂದು ತಿಳಿಸಿದರು.

‘ನೀಲಿ ಆಕಾಶಕ್ಕಾಗಿ ಸ್ವಚ್ಛ ಗಾಳಿ’ಯು ಅಂತಾರಾಷ್ಟ್ರೀಯ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ‘ಶುದ್ಧ ಗಾಳಿಗಾಗಿ ಜೊತೆಗೂಡಿ’ ಎಂಬ ಪರಿಕಲ್ಪನೆಯಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಎಲ್ಲರೂ ಕೈಜೋಡಿಸುವಂತೆ ತಿಳಿಸಿದರು.

ಆರ್.ವಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎನ್. ಸುಬ್ರಮಣ್ಯ ಮಾತನಾಡಿ, ಕಳೆದ ಒಂದು ದಶಕದಲ್ಲಿ ತಂತ್ರಜ್ಞಾನವು ಸಾಕಷ್ಟು ಮುಂದುವರಿದಿದೆ. ಉತ್ತಮ ಪರಿಸರವನ್ನು ಕಾಪಾಡಲು ಎಲ್ಲರೂ ಜಾಗ್ರತೆ ವಹಿಸಬೇಕಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net