

ಗಂಗೊಳ್ಳಿ: ದೇವಸ್ಥಾನದಲ್ಲಿ ಭಾವುಕತೆ ಉಂಟು ಮಾಡಿ, ಊರಿಗೆ ನೆಮ್ಮದಿ ತರುವ ಕೇಂದ್ರಗಳಾಗಬೇಕು. ದೇವಸ್ಥಾನದ ಶುಚಿತ್ವ, ನಡೆಯುವ ಆರಾಧನೆ, ಭಜನೆ, ಸಂಪ್ರದಾಯ, ಕಾರ್ಯಕ್ರಮಗಳು ಸಮಾಜದ ಕೇಂದ್ರವಾಗಿ ರೂಪುಗೊಂಡಾಗ ಆ ದೇವಸ್ಥಾನ ಸಮಾಜಕ್ಕೊಂದು ಕೊಡುಗೆಯಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರ ತಾಲೂಕಿನ ಸೇನಾಪುರ ಶ್ರೀ ಕ್ಷೇತ್ರ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ನಿರ್ಮಿಸಲ್ಪಟ್ಟ ನೂತನ ಸಭಾಗೃಹ ಮತ್ತು ಭೋಜನಶಾಲೆ ಕಟ್ಟಡ ಸ್ಕಂದ ಭವನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಬಿ.ಅರುಣ್ ಕುಮಾರ್ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ನೂತನ ಸಭಾಗೃಹ ಮತ್ತು ಭೋಜನಶಾಲೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಉಪಸ್ಥಿತರಿದ್ದರು.
ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಬಿ.ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ ಶ್ಯಾನುಭಾಗ್ ಮತ್ತು ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಸುಬ್ರಹ್ಮಣ್ಯನ ಕ್ಷೇತ್ರದಲ್ಲಿ ಸದಾ ಅನ್ನದಾನ ನಡೆಯುತ್ತಿರಬೇಕು. ಸಂಕರ್ಷಣ ಸ್ವರೂಪಿ ಶ್ರೀ ಸುಬ್ರಹ್ಮಣ್ಯನ ಮೇಲೆ ವಿಶ್ವಾಸವಿಟ್ಟು ಭಕ್ತಿ ಶ್ರದ್ಧೆಯಿಂದ ಆರಾಧಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಸುಬ್ರಹ್ಮಣ್ಯನ ಆರಾಧನೆ ನಿತ್ಯ ನಿರಂತರ ಮಾಡಿದರೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. -ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಉಡುಪಿ ಶ್ರೀ ಕೃಷ್ಣಾಪುರ ಮಠ https://www.vijayavani.net/hattiyangadi-siddhivinayak-school-receives-award https://www.vijayavani.net/christmas-is-the-festival-of-gods-love