

ವಿರಾಜಪೇಟೆ:
ಕ್ರೀಡಾಪಟುಗಳಲ್ಲಿ ಶಿಸ್ತು ಮುಖ್ಯವಾಗಿದೆ ಎಂದು ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅಭಿಪ್ರಾಯಪಟ್ಟರು. ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾವಳಿ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಕಾಲೇಜು ಜೀವನ ಅತೀ ಮುಖ್ಯವಾಗಿದೆ. ಆಟಗಾರರು ಶಿಸ್ತನ್ನು ಕಾಪಾಡುವುದರ ಮೂಲಕ ಆರೋಗ್ಯಕರ ಜೀವನ ನಡೆಸುವಂತಾಗಬೇಕು. ಆಟದಲ್ಲಿ ಗೆಲ್ಲುವುದಕ್ಕಿಂತ ಪಾಲ್ಗೊಳ್ಳುವಿಕೆ ಅತಿ ಮುಖ್ಯ ಎಂದು ಹೇಳಿದರು.
ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರೆ. ಫಾ. ಮದಲೈ ಮುತ್ತು ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿ ಕ್ರೀಡೆ ಅತೀ ಮುಖ್ಯವಾಗಿದೆ. ವಿದ್ಯಾರ್ಥಿಗಳು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು. ಮಾತ್ರವಲ್ಲದೆ ಕ್ರೀಡಾಕೂಟಗಳು ಸಾಮರಸ್ಯ ಬೆಳೆಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್ ಮಾತನಾಡಿ ಸಂಸ್ಥೆಯ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಇದೀಗ ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿರುವುದು ಮಹತ್ವದ್ದಾಗಿದೆ. ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವುದರ ಜೊತೆಗೆ ಬಾಂಧವ್ಯ ಬೆಸೆಯುತ್ತವೆ ಎಂದರು.
ವೇದಿಕೆಯಲ್ಲಿ ಉದ್ಯಮಿ ಮೊಹಮ್ಮದ್ ಷರೀಫ್, ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮಾ, ದೈಹಿಕ ಶಿಕ್ಷಕ ನಿರ್ದೇಶಕ ರಾಜ ರೈ ಉಪಸ್ಥಿತರಿದ್ದರು. ಉದ್ಘಾಟನಾ ಪಂದ್ಯ ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆ ಹಾಗೂ ಪ್ರಗತಿ ಶಾಲಾ ವಿದ್ಯಾರ್ಥಿಗಳ ನಡುವೆ ನಡೆಯಿತು. ಮೊದಲ ಪಂದ್ಯ ಮಡಿಕೇರಿಯ ಎಫ್.ಎಂ.ಸಿ ಕಾಲೇಜು ಹಾಗೂ ಬೆಳ್ತಂಗಡಿಯ ಸೇಕ್ರೆಡ್ ಹಾರ್ಟ್ ಕಾಲೇಜುಗಳ ನಡುವೆ ನಡೆಯಿತು.
ಎರಡು ದಿನಗಳ ಕಾಲ ನಡೆಯುವ ಈ ಪಂದ್ಯಾಟದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಒಟ್ಟು ೩೨ ತಂಡಗಳು ಭಾಗವಹಿಸಲಿವೆ.