ಹಂಪನಾ ಅವರಿಂದ ಮೈಸೂರು ದಸರಾ ಉದ್ಘಾಟನೆ

hampana
Published on

ಮೈಸೂರು: ಪ್ರಸಕ್ತ ಸಾಲಿನ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.


ನಗರಕ್ಕೆ ಶುಕ್ರವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯವನ್ನು ಪ್ರಕಟಿಸಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹೆಸರಾಂತ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.


ದಸರಾ ಉನ್ನತ ಸಮಿತಿ ಸಭೆಯಲ್ಲಿ ದಸರಾ ಉದ್ಘಾಟಕರ ಆಯ್ಕೆಯನ್ನು ನನ್ನ ವಿವೇಚನೆಗೆ ಬಿಡಲಾಗಿತ್ತು. ಅಂತೆಯೇ ಹಂಪನಾ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಅವರಿಗೆ ಶೀಘ್ರದಲ್ಲೇ ಅಧಿಕೃತ ಆಹ್ವಾನ ನೀಡಲಾಗುವುದು ಎಂದು ಸಿಎಂ ತಿಳಿಸಿದರು.

ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಅಕ್ಟೋಬರ್ 3 ರಂದು ಬೆಳಗ್ಗೆ 9.15 ರಿಂದ 9.45 ರೊಳಗಿನ ಶುಭ ಘಳಿಗೆಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ದಸರಾ ಮಹೋತ್ಸವವನ್ನು ಉದ್ಘಾಟನೆ ಮಾಡಲಾಗುತ್ತದೆ. ಬಳಿಕವೇ ನಾಡಹಬ್ಬಕ್ಕೆ ಚಾಲನೆ ದೊರೆಯಲಿದೆ.

ಹಂಪನಾಗೆ ಒಲಿದ ಭಾಗ್ಯ


ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕ ಹಂ.ಪ. ನಾಗರಾಜಯ್ಯ ಅವರಿಗೆ ಮೈಸೂರು ದಸರಾ ಉದ್ಘಾಟನೆ ಮಾಡುವ ಭಾಗ್ಯ ಒಲಿದಿದೆ. ಜೈನ ಸಮುದಾಯದವರಾದ ಅವರನ್ನು ಆಯ್ಕೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲಾಗಿದೆ.


ದಸರಾ ಉದ್ಘಾಟನೆಗಾಗಿ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ, ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತ್ತು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೆಸರು ಸಹ ಚರ್ಚೆಯಲ್ಲಿ ಇತ್ತು. ಈ ಪೈಕಿ ಹಂಪನಾ ಅವರಿಗೆ ಅದೃಷ್ಟ ಒಲಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net